ADVERTISEMENT

ಹಿಂದೂ ಐಕ್ಯ ಬಿಂಬಿಸಿದ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಮೇ 2017, 7:16 IST
Last Updated 17 ಮೇ 2017, 7:16 IST

ಹುಬ್ಬಳ್ಳಿ:  ಸನಾತನ ಸಂಸ್ಥೆ ಸಂಸ್ಥಾಪಕ ಡಾ.ಜಯಂತ ಆಠವಲೆ ಅವರ ಅಮೃತ ಮಹೋತ್ಸವ ಪ್ರಯುಕ್ತ ಹಿಂದೂ ಜನಜಾಗೃತಿ ಸಂಸ್ಥೆ ವತಿಯಿಂದ ನಗರದಲ್ಲಿ ಮಂಗಳವಾರ ಹಿಂದೂ ಐಕ್ಯ ಭವ್ಯ ಮೆರವಣಿಗೆ ನಡೆಯಿತು.

ದಾಜಿಬಾನಪೇಟೆಯ ದುರ್ಗಾ ಗುಡಿ ಬಳಿ ಆರಂಭವಾದ ಮೆರವಣಿಗೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಚಾಲನೆ ನೀಡಿದರು. ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯು ದುರ್ಗದ ಬೈಲ್‌ನಲ್ಲಿ ಅಂತ್ಯಗೊಂಡಿತು.

ಕುಂಭ ಹೊತ್ತ ಮಹಿಳೆಯರು, ಹಿಂದೂ ರಾಷ್ಟ್ರ ಸ್ಥಾಪನೆಯ ವಿಚಾರಗಳನ್ನು ಒಳಗೊಂಡ ಚಿತ್ರರಥ, ಪ್ರಾಚೀನ ಕಲೆ, ಹಿಂದೂ ಸಂಸ್ಕೃತಿಯ ಶ್ರೇಷ್ಠತೆಯನ್ನು ಬಿಂಬಿಸುವ ಉಡುಗೆ–ತೊಡುಗೆಗಳನ್ನು ತೊಟ್ಟ ಮಹಿಳೆಯರು, ಪುರುಷರು ಮತ್ತು ಮಕ್ಕಳು ಮೆರವಣಿಗೆಯಲ್ಲಿ ಗಮನ ಸೆಳೆದರು. ಲಾಠಿ, ದಂಡ ಸರಪಳಿ ಪ್ರಾತ್ಯಕ್ಷಿಕೆ ನೀಡಲಾಯಿತು.

ADVERTISEMENT

ಅಯ್ಯಪ್ಪ ಭಕ್ತವೃಂದ, ಶಿವಾಜಿ ಫೌಂಡೇಷನ್‌, ಮಹಿಳಾ ಮಂಡಳಿ, ಸ್ವಾಮಿ ವಿವೇಕಾನಂದ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ಪ್ರವಚನಕಾರ ಸಮೀರ ಆಚಾರ್ಯ, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕಾರ ಗುರುಪ್ರಸಾದ್‌, ಎಸ್‌ಎಸ್‌ಕೆ ಸಮಾಜ ಮತ್ತು ಮೈತ್ರಿ ಮಂಡಲ ಅಧ್ಯಕ್ಷೆ ರತ್ನಮಾಲಾ ಬದಿ, ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಶಾಂತಣ್ಣ ಕಡಿವಾಲ ಭಾಗವಹಿಸಿದ್ದರು.

ಗುಪ್ತಚರ ಇಲಾಖೆ ವಿಫಲ: ಆರೋಪ ‘ರಾಜ್ಯದಲ್ಲಿ ವಿವಿಧ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದ್ದರೂ ಈ ಬಗ್ಗೆ ಗುಪ್ತಚರ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ಗುಪ್ತಚರ ಇಲಾಖೆ ಸಂಪೂರ್ಣ ವಿಫಲ ಆಗಿದೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಇಲ್ಲಿ ಆರೋಪಿಸಿದರು.

ಸನಾತನ ಸಂಸ್ಥೆ ಸಂಸ್ಥಾಪಕ ಡಾ.ಜಯಂತ ಅಠವಲೆ ಅವರ ಅಮೃತ ಮಹೋತ್ಸವ ಪ್ರಯುಕ್ತ ಹಿಂದೂ ಜನಜಾಗೃತಿ ಸಮಿತಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಐಕ್ಯ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು.

‘ಭೂಗತ ಪಾತಕಿ ಛೋಟಾ ಶಕೀಲನ ಬಲಗೈ ಬಂಟ ರಶೀದ್ ಮಲಬಾರಿ ನನ್ನನ್ನು ಮತ್ತು ಸಂಸದ ವರುಣ್‌ ಗಾಂಧಿ ಅವರನ್ನು ಕೊಲ್ಲಲು ಹಣ ಪಡೆದಿದ್ದ. ಆತನನ್ನು ಈ ಹಿಂದೆ ಬಂಧಿಸಲಾಗಿತ್ತು. ಆದರೆ, ಆತನಿಗೆ ಜಾಮೀನು ಸಿಕ್ಕಿತು. ಆತ ಬೆಳಗಾವಿ–ಮುಂಬೈಗೆ ಓಡಾಡಿಕೊಂಡಿದ್ದ. ಆದರೆ, ಈ ಬಗ್ಗೆ ಪೊಲೀಸರಿಗೆ ಮತ್ತು ಗುಪ್ತಚರ ಇಲಾಖೆಗೆ ಗೊತ್ತೇ ಇರಲಿಲ್ಲ. ಆತನನ್ನು ಬಂಧಿಸುವ ಬದಲು ಗುಂಡಿಕ್ಕಿ ಕೊಲ್ಲಬೇಕು’ ಎಂದು ಒತ್ತಾಯಿಸಿದರು. 

‘ದೇಶದಲ್ಲಿ ಮುಸ್ಲಿಮರು ಬೆಳವಣಿಗೆ ಹೊಂದಲು ಮತ್ತು ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಲು ಕಾಂಗ್ರೆಸ್‌ ಕಾರಣ’ ಎಂದು ಆರೋಪಿಸಿದ ಅವರು ‘ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಸಾಧ್ಯ’ ಎಂದು ಮುತಾಲಿಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.