ADVERTISEMENT

₹130 ಕೋಟಿ ಅನುದಾನ ಬಿಡುಗಡೆ: ವಿನಯ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 9:54 IST
Last Updated 12 ಡಿಸೆಂಬರ್ 2017, 9:54 IST
ಧಾರವಾಡದ ಬ್ರಹ್ಮ ಚೈತನ್ಯ ನಗರದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗೆ ವಿನಯ ಕುಲಕರ್ಣಿ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಧಾರವಾಡದ ಬ್ರಹ್ಮ ಚೈತನ್ಯ ನಗರದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗೆ ವಿನಯ ಕುಲಕರ್ಣಿ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.   

ಧಾರವಾಡ: ‘ಗ್ರಾಮೀಣ ಕ್ಷೇತ್ರಕ್ಕೆ ಒಳಪಡುವ ಮಹಾನಗರ ಪಾಲಿಕೆಯ ಎಂಟು ವಾರ್ಡ್‌ಗಳಲ್ಲಿನ ಸಿಸಿ ರಸ್ತೆ, ಗಟಾರು, ತೆರೆದ ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹ 130 ಕೋಟಿ ಅನುದಾನ ಒದಗಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಇಲ್ಲಿನ ಬ್ರಹ್ಮ ಚೈತನ್ಯ ನಗರದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 3 ನೇ ವಾರ್ಡ್‌ ಅತ್ಯಂತ ದೊಡ್ಡದಾಗಿದ್ದು, ₹ 7 ಕೋಟಿ ಹೆಚ್ಚಿನ ಅನುದಾನದಲ್ಲಿ ಸಿಸಿ ರಸ್ತೆ, ಗಟಾರು, ಉದ್ಯಾನ ನಿರ್ಮಿಸಲಾಗಿದೆ. ಎತ್ತಿನಗುಡ್ಡದ ನಿವಾಸಿಗಳ ಹಿತದೃಷ್ಟಿಯಿಂದ ₹ 1.70 ಲಕ್ಷ ವೆಚ್ಚದಲ್ಲಿ ಒಳಚರಂಡಿ  ಕಾಮಗಾರಿ ಪ್ರಾರಂಭಿಸಲಾಗಿದೆ. 2016–17 ನೇ ಸಾಲಿನ ₹ 100 ಕೋಟಿ ವಿಶೇಷ ನಗರೋತ್ಥಾನ ಯೋಜನೆಯಡಿ ದೊಡ್ಡ ನಾಯಕನಕೊಪ್ಪದ ಕೆ.ಎಚ್.ಬಿ ಕಾಲೊನಿಯಲ್ಲಿ ₹ 80 ಲಕ್ಷ ಹಾಗೂ ತಾಲ್ಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಸಿಎಂಜಿಆರ್‌ವೈ ಯೋಜನೆಯಡಿ ₹ 34 ಲಕ್ಷ ವೆಚ್ಚದ ರಸ್ತೆ ಡಾಂಬರೀಕಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ’ ಎಂದರು.

ADVERTISEMENT

ಸ್ಟೇಟ್‌ ಬ್ಯಾಂಕ್ ಕಾಲೊನಿಯ ಉದ್ಯಾನ, ಕೊಪ್ಪದಕೆರಿಯ ಉದ್ಯಾನ ಸುಧಾರಣೆ ಕಾಮಗಾರಿ, ಸೋನಾಪೂರ ಕಾಲೊನಿಯಲ್ಲಿ ₹80 ಲಕ್ಷ ವೆಚ್ಚದ ತೆರೆದ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.

ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ಸುರೇಶ ಯಲಿಗಾರ, ದೊಡ್ಡ ನಾಯಕನಕೊಪ್ಪದ ನಿವಾಸಿಗಳ ಹಿತರಕ್ಷಣ ಸಂಘದ ಅಧ್ಯಕ್ಷ ಶಂಕರ ಬಸವರೆಡ್ಡಿ, ಬ್ರಹ್ಮ ಚೈತನ್ಯ ನಗರದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ. ನರಸಿಹು, ಬಿ.ಐ.ರಡ್ಡಿ, ಎಸ್.ಡಿ.ಯಡ್ರಾವಿ, ಬಿ.ಪಿ.ಹಿಂಗಣಿ, ಎಂ.ಎಸ್.ತಿಮ್ಮೋಲಿ, ಎಂ.ಬಿ.ಪಾಟೀಲ, ಎಂ.ಎ.ಅಳವಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.