ADVERTISEMENT

‘ಕರ್ನಾಟಕ ರೆಜಿಮೆಂಟ್ ಇಲ್ಲದಿರುವುದು ಕೊರತೆ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 9:56 IST
Last Updated 29 ಜನವರಿ 2018, 9:56 IST

ಧಾರವಾಡ: ‘ಭಾರತೀಯ ಸೇನೆಯಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಹಾಗೂ ಉನ್ನತ ಹುದ್ದೆಯಲ್ಲಿದ್ದರೂ ಕರ್ನಾಟಕ ರೆಜಿಮೆಂಟ್‌ ಇಲ್ಲದಿರುವುದು ಒಂದು ದೊಡ್ಡ ಕೊರತೆ’ ಎಂದು ಪುರಸ್ಕಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೃಷ್ಣ ಜೋಶಿ ಅಭಿಪ್ರಾಯಪಟ್ಟರು.

ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ, ಪುರಸ್ಕಾರ ಸಂಸ್ಥೆ ಹಾಗೂ ಜೈಜವಾನ್ ಸೈನಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 118ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಇಂಥದ್ದೊಂದು ಕೊರತೆಯನ್ನು ನೀಗಿಸಲು, ಕನ್ನಡಿಗರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಸೇರಿ ದೇಶ ಸೇವೆ ಮಾಡಲು ಸನ್ನದ್ಧರಾಗಬೇಕು. ಸೈನ್ಯ ಸೇರುವ ಯುವಕರಿಗೆ ಸೈನಿಕ ಸಮಿತಿ ಸೂಕ್ತ ಮಾರ್ಗದರ್ಶನ ನೀಡಲು ಸಿದ್ಧವಿದೆ. ವೀರ ಸೇನಾನಿಗಳ ಜನ್ಮದಿನಾಚರಣೆ ಮೂಲಕ ಅವರ ಸಾಹಸಗಾಥೆಗಳನ್ನು ಯುವಕರಿಗೆ ತಿಳಿಸಿದಂತಾಗುತ್ತದೆ’ ಎಂದರು.

ADVERTISEMENT

ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮೀನಗಡ ಮಾತನಾಡಿ, ‘ಕಾರ್ಗಿಲ್ ಸ್ತೂಪದ ಆವರಣದಲ್ಲಿ ಭೂದಳದ ಮಹಾದಂಡನಾಯಕರಾಗಿ ಸೇವೆ ಸಲ್ಲಿಸಿದ ಮೂವರು ಕನ್ನಡಿಗರಾದ ಜನರಲ್ ಕೆ.ಎಂ.ಕಾರ್ಯಪ್ಪ, ಜನರಲ್ ಕೆ.ಎಸ್‌.ತಿಮ್ಮಯ್ಯ ಹಾಗೂ ಜನರಲ್‌ ಜಿ.ಜಿ.ಬೇವೂರ ಅವರ ಕಂಚಿನ ಪುತ್ಥಳಿಗಳನ್ನು ಸ್ಥಾಪಿಸಲಾಗುವುದು’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಸರ್ವಾನುಮತದಿಂದ ನಿರ್ಣಯ ತೆಗೆದುಕೊಂಡಿದೆ. ಈ ಕಾರ್ಯ ಶೀಘ್ರದಲ್ಲಿ ಆಗಬೇಕು’ ಎಂದು ಒತ್ತಾಯಿಸಿದರು.

ಕಾರ್ಗಿಲ್ ಸ್ತೂಪದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ದೇಶಕ್ಕಾಗಿ ದುಡಿದ ವೀರ ಸೇನಾನಿಗಳ ಭಾವಚಿತ್ರಗಳಿಗೆ ಪುಷ್ಪವೃಷ್ಟಿ ಮಾಡಿ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಗೌರವ ಸಮರ್ಪಿಸಿದರು. ಡಾ. ಶ್ರೀಧರ ಕುಲಕರ್ಣಿ ಅವರು ‘ನೂರು ಬಾರಿ ವಂದನೆ, ತಾಯಿ ನಿನಗೆ ನೂರು ಬಾರಿ ವಂದನೆ’ ಸೇರಿದಂತೆ ಹಲವು ದೇಶಭಕ್ತಿ ಗೀತೆಗಳನ್ನು ಹಾಗೂ ವೀರ ಗೀತೆಗಳನ್ನು ಹಾಡಿದರು.

ಎಸ್.ಬಿ. ಗುತ್ತಲ, ಪಂಡಿತ ಮುಂಜಿ, ವಿರೂಪಾಕ್ಷಪ್ಪ ಲಂಗೋಟಿ, ಶಿವಾಜಿ ಕಾಳೆ, ವಸಂತ ಲಾಡ, ವಿಠಲ ಕುಲಕರ್ಣಿ, ಲಕ್ಷ್ಮಣ ಹೂಗಾರ, ಶಿವಾನಂದ ಹಲಸಗಿ, ಎಂ.ಬಿ. ಬೇನಪ್ಪನವರ, ಎಸ್.ವೈ. ಕುಲಕರ್ಣಿ, ಎ.ಎ.ಬುರಡಿ, ಎಂ.ಸಿ. ಬಿರಾದಾರ, ಕೆರೂಡಿ, ನೇಸರಗಿ ಮತ್ತು ಜೈ ಜವಾನ್‌ ಸೈನಿಕ ಶಾಲೆಯ ಅಶೋಕ ಕುಂಬಾರಿ ಇದ್ದರು. ಸೈನಿಕ ಶಾಲೆ ಮಕ್ಕಳು ಶಿಸ್ತಿನಿಂದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.