ADVERTISEMENT

ಅನುದಾನ ಹಂಚಿಕೆ ತಾರತಮ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 13 ಮೇ 2017, 9:24 IST
Last Updated 13 ಮೇ 2017, 9:24 IST

ಲಕ್ಷ್ಮೇಶ್ವರ: ಎಸ್‌.ಎಫ್‌.ಸಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇದರಿಂದ ವಾರ್ಡ್‌ನ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ ಎಂದು ಪುರಸಭೆಯ 11ನೇ ವಾರ್ಡ್‌ನ ಸದಸ್ಯೆ ಫರ್ಜಾನಾ ಸಿದ್ದಿ ಆರೋಪಿಸಿದರು.

ಇಲ್ಲಿನ ಪುರಸಭೆ ಸಭಾ ಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪ್ರತಿ ಬಾರಿಯೂ ನನ್ನ ವಾರ್ಡ್‌ ಅನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ಅಭಿವೃದ್ಧಿಯಲ್ಲಿ ವಾರ್ಡ್‌ ಹಿಂದುಳಿದಿದೆ’ ಎಂದು ಹೇಳಿದರು.

ಈ ವಿಷಯವಾಗಿ ಫರ್ಜಾನಾ ಸಿದ್ದಿ ಮತ್ತು  ಸದಸ್ಯರಾದ ಲಂಕೆಪ್ಪ ಶೆರಸೂರಿ ನಡುವೆ  ವಾಗ್ವಾದ ನಡೆಯಿತು. ‘ಅನುದಾನ ಕೇಳುವುದು ತಪ್ಪಾ‘ ಎಂದು ಮಹಿಳಾ ಸದಸ್ಯೆಯರು ಪ್ರಶ್ನಿಸಿದರು.

ADVERTISEMENT

ಅಧ್ಯಕ್ಷ ರಾಜಣ್ಣ ಕುಂಬಿ,  ‘ಅನುದಾನ ಹಂಚಿಕೆ ವಿಷಯದಲ್ಲಿ ಯಾರಿಗೂ ತಾರತಮ್ಯ ಮಾಡಿಲ್ಲ. 11ನೇ ವಾರ್ಡ್‌ನಲ್ಲಿ ಬರುವ ಕೊಳಚೆ ಪ್ರದೇಶದ ಅಭಿವೃದ್ಧಿಗೆ ₹ 50 ಲಕ್ಷ  ನೀಡಲಾಗಿದೆ. ಅದರಂತೆ ನಗರಾಭಿವೃದ್ಧಿ ಯೋಜನೆಯಡಿ ಪ್ರತಿ ವಾರ್ಡ್‌ಗೆ ₹ 12 ಲಕ್ಷ  ಅನುದಾನ ನೀಡಲಾಗಿದೆ.  ವಾರ್ಡ್‌ನ ಸದಸ್ಯ ಅಭಿಪ್ರಾಯ ಪಡೆದೇ ಕ್ರಿಯಾ ಯೋಜನೆ ತಯಾರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಪರವಾನಗಿ ಅಗತ್ಯ: ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಆಸ್ತಿಯಲ್ಲಿ ಕೊಳವೆಬಾವಿ ಕೊರೆಸುವ ಮುನ್ನಾ ಕಡ್ಡಾಯವಾಗಿ ಪುರಸಭೆಯಿಂದ ಪರವಾನಿಗೆ ಪಡೆಯಬೇಕು’ ಎಂಬ ವಿಷಯಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು. 

‘ಪಟ್ಟಣದಲ್ಲಿ ಈ ಅವಧಿಯಲ್ಲಿಯೇ ನೂತನ ವಾಣಿಜ್ಯ ಮಳಿಗೆಗಳನ್ನು ಕಟ್ಟಿಸಬೇಕು’ ಎಂದು ಸದಸ್ಯ ನಾಗಪ್ಪ ಓಂಕಾರಿ ಒತ್ತಾಯಿಸಿದರು. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ₹ 4 ಸಾವಿರ ಮತ್ತು ರಾಜ್ಯ ಸರ್ಕಾರ ₹ 11 ಸಾವಿರ ಸೇರಿದಂತೆ ಒಟ್ಟು ₹ 15 ಸಾವಿರ  ಸಹಾಯಧನ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಅಧ್ಯಕ್ಷ ಕುಂಬಿ ಸಭೆಗೆ ತಿಳಿಸಿದರು.

ಕರೇಗೌರಿ ಆಶ್ರಯ ಕಾಲೊನಿಗೆ ಜಿ.ಎಂ. ಮಹಾಂತಶೆಟ್ಟರ ನಗರ ಹಾಗೂ ಕೋರ್ಟ್ ಹತ್ತಿರದ ವರ್ತುಲಕ್ಕೆ ಕೋರ್ಟ್‌ ಸರ್ಕಲ್‌ ಎಂದು ನಾಮಕರಣ ಮಾಡುವಂತೆ ಸದಸ್ಯ ಎಂ.ಆರ್‌. ಪಾಟೀಲ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.