ADVERTISEMENT

ಈರುಳ್ಳಿ ಬೆಳೆದವರಿಗೆ ಬಂಪರ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 7:02 IST
Last Updated 8 ನವೆಂಬರ್ 2017, 7:02 IST
ಗದಗ ಎಪಿಎಂಸಿಯಲ್ಲಿ ಮಂಗಳವಾರ ಈರುಳ್ಳಿ ಹರಾಜು ಪ್ರಕ್ರಿಯೆ ನಡೆಯಿತು
ಗದಗ ಎಪಿಎಂಸಿಯಲ್ಲಿ ಮಂಗಳವಾರ ಈರುಳ್ಳಿ ಹರಾಜು ಪ್ರಕ್ರಿಯೆ ನಡೆಯಿತು   

ಗದಗ: ಈ ಬಾರಿ ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಈರುಳ್ಳಿ ಬೆಳೆದ ರೈತರಿಗೆ ಬಂಪರ್‌ ಬೆಲೆ ಲಭಿಸಿದೆ. ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎ.ಪಿ.ಎಂ.ಸಿ) ಸದ್ಯ ಪ್ರತಿ ಕ್ವಿಂಟಲ್‌ ಈರುಳ್ಳಿ ಸರಾಸರಿ ₹ 2,800ರಿಂದ ₹ 3,000ಕ್ಕೆ ಮಾರಾಟವಾಗುತ್ತಿದ್ದು, ಉತ್ತಮ ಧಾರಣೆ ಲಭಿಸಿರುವುದರಿಂದ ರೈತರು ಖುಷಿಯಾಗಿದ್ದಾರೆ.

ಹಿಂಗಾರಿನ ಆರಂಭದಲ್ಲಿ ಸುರಿದ ಮಹಾ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಜಮೀನಿನಲ್ಲಿ ನೀರು ನಿಂತು ಈರುಳ್ಳಿ ಕೊಳೆತು ಹೋಗಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎ.ಪಿ.ಎಂ.ಸಿಗೆ ಆವಕವಾಗುತ್ತಿರುವ ಈರುಳ್ಳಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅತಿವೃಷ್ಟಿಯಿಂದ ಈರುಳ್ಳಿ ಗಡ್ಡೆಗಳ ಗಾತ್ರವೂ ತಗ್ಗಿದೆ.

‘ಆವಕ ಕಡಿಮೆ ಇದ್ದು, ಬೇಡಿಕೆ ಹೆಚ್ಚಿರುವುದಿಂದ ಬೆಲೆ ಏರಿಕೆಯಾಗಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ದೊಡ್ಡ ಗಾತ್ರದ, ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿಗೆ ₹ 40 ರಿಂದ ₹ 45ರ ತನಕ ಮಾರಾಟವಾಗುತ್ತಿದೆ. ರೈತರಿಗೆ ಕೆ.ಜಿಗೆ ಸರಾಸರಿ ₹ 25ರಿಂದ ₹ 30 ಧಾರಣೆ ಲಭಿಸುತ್ತಿದೆ’ ಎಂದು ಗದಗ ಎ.ಪಿ.ಎಂ.ಸಿಯ ಖರೀದಿದಾರರೊಬ್ಬರು ಪತ್ರಿಕೆಗೆ ತಿಳಿಸಿದರು.

ADVERTISEMENT

‘ಮುಂಗಾರಿನಲ್ಲಿ ಮತ್ತು ನೀರಾವರಿ ಸೌಲಭ್ಯ ಹೊಂದಿರುವ ಜಮೀನಿನಲ್ಲಿ ಬೆಳೆಯಲಾದ ಈರುಳ್ಳಿ ಈಗ ಮಾರುಕಟ್ಟೆಗೆ ಬರುತ್ತಿದೆ. ಜಿಲ್ಲೆಯ ಐದೂ ಎ.ಪಿ.ಎಂ.ಸಿಗಳು ಸೇರಿ ಪ್ರತಿನಿತ್ಯ ಸರಾಸರಿ 1,200ರಿಂದ 1,500 ಕ್ವಿಂಟಲ್‌ನಷ್ಟು ಈರುಳ್ಳಿ ಆವಕವಾಗುತ್ತಿದೆ.

ಸಾಮಾನ್ಯ ಗುಣಮಟ್ಟದ, ಚಿಕ್ಕ ಗಾತ್ರದ ಗಡ್ಡೆಗಳಿಗೂ ಕ್ವಿಂಟಲ್‌ಗೆ ಸರಾಸರಿ ₹ 2 ಸಾವಿರ ಧಾರಣೆ ಲಭಿಸುತ್ತಿದೆ. ಈ ಬಾರಿ ಈರುಳ್ಳಿ ಇಳುವರಿ ಕಡಿಮೆ. ಆದರೆ, ಉತ್ತಮ ಬೆಲೆ ಇದೆ. ‘ಬೆಲೆ ಇದ್ದಾಗ, ಮಾಲು ಇರುವುದಿಲ್ಲ. ಮಾಲು ಇದ್ದಾಗ ಬೆಲೆ ಇರುವುದಿಲ್ಲ’ ಎಂದು ಅವಿಸೋಮಾಪುರ ಗ್ರಾಮದ ರೈತ ಹಾಲಪ್ಪ ಜಕ್ಕಮ್ಮನವರ ಹೇಳಿದರು.

‘ಕಳೆದ ಬಾರಿ 5 ಎಕರೆಯಲ್ಲಿ 250 ಚೀಲ ಈರುಳ್ಳಿ ಬೆಳೆದಿದ್ದೆವು. ಆದರೆ, ಉತ್ತಮ ಬೆಲೆ ಲಭಿಸಿರಲಿಲ್ಲ. ಈ ಬಾರಿ ಮುಂಗಾರಿನಲ್ಲಿ ಒಂದು ಎಕರೆಯಲ್ಲಿ ಈರುಳ್ಳಿ ಬಿತ್ತಿದ್ದೆವು. ಅತಿವೃಷ್ಠಿಯಿಂದ ಅರ್ಧದಷ್ಟು ಕೊಳೆತು ಹೋಗಿದೆ. ಬಂದ ಮಾಲಿಗೆ ಉತ್ತಮ ಬೆಲೆ ಲಭಿಸಿದೆ’ ಎಂದು ಅವರು ಹೇಳಿದರು.

‘ಒಂದು ಎಕರೆಗೆ 16 ಚೀಲ ಈರುಳ್ಳಿ ಬಂದಿದೆ. ಬೀಜ, ಗೊಬ್ಬರ, ಆಳಿನ ಕೂಲಿ, ಬಾಡಿಗೆ ಹಾಗೂ ಎಲ್ಲ ಸೇರಿ ₹ 30 ಸಾವಿರದಿಂದ ₹ 40 ಸಾವಿರ ಖರ್ಚಾಗಿದೆ. ಎಲ್ಲ ಕಳೆದು ₹ 5 ರಿಂದ ₹ 10 ಸಾವಿರ ಲಾಭ ಉಳಿಯುತ್ತದೆ’ ಎಂದು ಗದಗ ಎ.ಪಿ.ಎಂ.ಸಿಗೆ ಈರುಳ್ಳಿ ಮಾರಾಟ ಮಾಡಲು ಬಂದಿದ್ದ ರೈತ ಮುತ್ತು ಬಿಳೆಯಲಿ, ಸಿದ್ದಪ್ಪ ನಡವಳ್ಳಿ ಹೇಳಿದರು.
ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.