ADVERTISEMENT

ಉಪವಾಸ ಸತ್ಯಾಗ್ರಹಕ್ಕೆ ಜನ ಬೆಂಬಲ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:53 IST
Last Updated 21 ಜುಲೈ 2017, 6:53 IST
ನರಗುಂದದ ಮಹದಾಯಿ ಹೋರಾಟ ವೇದಿಕೆಯಲ್ಲಿ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವೀರೇಶ ಸೊಬರದಮಠ ಅವರಿಗೆ ಬೆಂಬಲ ಸೂಚಿಸಿ, ಅವರೊಂದಿಗೆ ಗುರುವಾರ ಉಪವಾಸ ಕೈಗೊಂಡ ರೈತರು
ನರಗುಂದದ ಮಹದಾಯಿ ಹೋರಾಟ ವೇದಿಕೆಯಲ್ಲಿ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವೀರೇಶ ಸೊಬರದಮಠ ಅವರಿಗೆ ಬೆಂಬಲ ಸೂಚಿಸಿ, ಅವರೊಂದಿಗೆ ಗುರುವಾರ ಉಪವಾಸ ಕೈಗೊಂಡ ರೈತರು   

ನರಗುಂದ: ಪಟ್ಟಣದಲ್ಲಿ ಮಹದಾಯಿಗೆ ಆಗ್ರಹಿಸಿ ರೈತ ಸೇನೆರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠರು  ಕೈಗೊಂಡ ಉಪವಾಸ ಸತ್ಯಾಗ್ರಹಕ್ಕೆ ಅಪಾರ ಜನಬೆಂಬಲ ವ್ಯಕ್ತವಾಗಿದೆ. ವೈದ್ಯರು, ವರ್ತಕರು, ವಿದ್ಯಾರ್ಥಿ ಗಳು  ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಗುರುವಾರ ವ್ಯಕ್ತಪಡಿಸಿದರು. ಸೊಬರದ ಮಠ ಅವರ ಜತೆಗೆ ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್‌.ಬಿ.ಜೋಗಣ್ಣವರ, ಉಮೇಶ ಅಸೂಟಿ, ಅರ್ಜುನ ಮಾನೆ, ಬಾಬು ಕಮ್ಮಾರ, ನಿಂಗಪ್ಪ ಬೆಳಗಲ್‌, ಬಿ.ಎಸ್‌.ಪಠಾಣ ಉಪವಾಸ ಸತ್ಯಾಗ್ರಹ ಕೈಗೊಂಡರು.

ಎಸ್‌.ಬಿ.ಜೋಗಣ್ಣವರ ಮಾತನಾಡಿ, ರೈತರ ಹೋರಾಟ ಆಕ್ರೋಶವಾಗುವ ಮುನ್ನ ಮಹದಾಯಿ ಯೋಜನೆ ಜಾರಿ ಗೊಳಿಸುವಂತೆ ಒತ್ತಾಯಿಸಿದರು. ಜಿಲ್ಲಾಧಿಕಾರಿ, ಎಸ್ಪಿ ಭೇಟಿ: ಜಿಲ್ಲಾಧಿಕಾರಿ ಮನೋಜ ಜೈನ್‌ ಹಾಗೂ ಎಸ್‌ಪಿ ಸಂತೋಷ ಬಾಬು ಧರಣಿ ವೇದಿಕೆಗೆ ಭೇಟಿ ನೀಡಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿರೇಶ ಸೊಬರದಮಠ ಎರಡು ವರ್ಷಗಳಿಂದ  ಈ ಭಾಗದ ರೈತರು ನಿರಂತರ ಹೋರಾಟ ನಡೆಸಿದ್ದಾರೆ. ಆದ್ದರಿಂದ ಇದನ್ನು ಇಲ್ಲಿಯವರೆಗೂ ಯಾರೂ ಗಮನಿಸಿಲ್ಲ.

ADVERTISEMENT

ಆದ್ದರಿಂದ ನಾನು ಉಪವಾಸ ಕೈ ಬಿಡುವ ಮಾತೇ ಇಲ್ಲ. ಸರ್ಕಾರಕ್ಕೆ ಹಾಗೂ  ಜನಪ್ರತಿನಿಧಿಗಳಿಗೆ ಕಳಕಳಿ ಇದ್ದರೆ ಈ ಭಾಗದ ನಾಲ್ಕು ಸಂಸದರು, ನಾಲ್ಕು ಜಿಲ್ಲೆಯ ಉಸ್ತುವಾರಿ ಸಚಿವರು, ಹಾಲಿ ಹಾಗೂ ಮಾಜಿ ಶಾಸಕರು, ವಿರೋಧ ಪಕ್ಷದ ನಾಯಕರು, ರಾಜ್ಯ ಎರಡು ಪಕ್ಷಗಳ ನಾಯಕರು ಒಂದಾಗಿ ಧರಣಿ  ವೇದಿಕೆಗೆ ಭೇಟಿ ನೀಡಬೇಕು.

ಈ ಯೋಜನೆ ಅನುಷ್ಠಾನದ ಕುರಿತು ಸ್ಪಷ್ಟಪಡಿಸಬೇಕು. ಆಗ ಮಾತ್ರ ಉಪವಾಸ ಕೈಬಿಡುವ ಬಗ್ಗೆ ಯೋಚಿಸಲಾಗುವುದು. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ಸಿಇಓ ಮಂಜುನಾಥ ಚವ್ಹಾಣ, ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪ ಗೋಳ, ಶಂಕ್ರಣ್ಣ ಅಂಬಲಿ, ರಮೇಶ ನಾಯ್ಕರ, ಮುತ್ತು ಕುರಿ, ವೀರಬಸಪ್ಪ ಹೂಗಾರ, ಪ್ರಕಾಶ, ಹನುಮಂತ ಕಂಬಳಿ ಇದ್ದರು.

ವೈದ್ಯರ ಬೆಂಬಲ: ಡಾ.ಸಿ.ಕೆ.ಪಾಟೀಲ ನೇತೃತ್ವದಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದ ಪಟ್ಟಣದ ವೈದ್ಯರು ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು. ಡಾ.ಸಿ.ಎಸ್‌.ಅಸೂಟಿ, ಡಾ.ಎಫ್‌.ಎಂ.ಹಸಬಿ, ಡಾ.ಅಮೀನ ಹುಯಿಲಗೋಳ, ಡಾ.ವಿ.ಕೆ.ಕಾಳೆ, ಎಂ.ಬಿ. ಹಿರೇಮಠ, ಡಾ.ಫತ್ತೇಪುರ, ಡಾ.ಜಿ.ಕೆ. ಭದ್ರಗೌಡ್ರ, ಡಾ.ಅಡ್ಡಣಗಿ ಇದ್ದರು.

ರೈತರ ಬೆಂಬಲ: ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಗುರುವಾರ ಪ್ರತಿಭಟನಾ ಸ್ಥಳಕ್ಕೆ ಬಂದ ರೈತರು ಹೋರಾಟಕ್ಕೆ ಬೆಂಬಲ ಸೂಚಿಸಿದರು.

ವಿದ್ಯಾರ್ಥಿಗಳ ಬೆಂಬಲ: ಉಪವಾಸ ಸತ್ಯಾಗ್ರಹಕ್ಕೆ ಪಟ್ಟಣದ  ಸಿದ್ದೇಶ್ವರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು, ಬಸವೇಶ್ವರ ಪ್ರಾಥಮಿಕಶಾಲೆ  ವಿದ್ಯಾರ್ಥಿ ಗಳು ಶಾಲೆಯಿಂದ ಪ್ರತಿಭಟನಾ ಮೆರ ವಣಿಗೆ ಕೈಗೊಂಡು ಧರಣಿ ವೇದಿಕೆಯತ್ತ ತೆರಳಿ ಬೆಂಬಲ ವ್ಯಕ್ತಪಡಿಸಿದರು.

ಯಮನೂರು ರೈತರ ಪಾದಯಾತ್ರೆ: ನವಲಗುಂದ ತಾಲ್ಲೂಕಿನ ಯಮನೂರು ಗ್ರಾಮದ ರೈತರು ಪಾದಯಾತ್ರೆ ಮೂಲಕ ಬಂದು  ಸೊಬರದಮಠರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.

30 ಕಿ.ಮೀ ಪಾದಯಾತ್ರೆಯಲ್ಲಿ ವೆಂಕಣ್ಣ ಸಂಜೀವಣ್ಣವರ, ಹನಮಂತ ಪಡೆಸೂರು, ನಾಗಪ್ಪ ಹಳ್ಯಾಳ, ಬಸಪ್ಪ ಸುಳ್ಳದ, ಮಡಿವಾಳಯ್ಯ ಕಂಬಿ, ಮಹಾಂತೇಶ ಮಠದ, ದತ್ತಾಜೀರಾವ್‌ ಖರ್ಗೆ, ಶರಣಪ್ಪ ಯಮನೂರು, ನಿಂಗಪ್ಪ ಸುರೇಬಾನ, ಆನಂದ ಕೆಸರೆಪ್ಪನವರ  ಸಾವಂತ್ರವ್ವ ಹಿರೇಮಠ, ಕಾಶವ್ವ ಚುಳಕಿ, ಸಿದ್ದಮ್ಮ ಸಾರಾವರಿ ಹಾಗೂ ಸುತ್ತಲಿನ ಗ್ರಾಮಗಳ ರೈತರು ಭಾಗವಹಿಸಿದ್ದರು.

ಆರೋಗ್ಯ ತಪಾಸಣೆ: ಐದು ದಿನಗಳಿಂದ ಉಪವಾಸ ನಿರತ ವೀರೇಶ ಸೊಬರದ ಮಠ ಅವರ ಆರೋಗ್ಯ ಏರುಪೇರಾ ಗಿದ್ದು, ವೈದ್ಯರು ಕಾಲಕಾಲಕ್ಕೆ ಮಾಡುತ್ತಿ ದ್ದಾರೆ. ಗ್ಲುಕೋಸ್‌ (ಸಲೈನ್‌) ಚಿಕಿತ್ಸೆ ಮುಂದುವರಿಸಲಾಗಿದೆ.

ಫೋನ್ ಕರೆ ಮಾಡಿ ಮನವೊಲಿಕೆಗೆ ಸಿ.ಎಂ ಯತ್ನ; ಪಟ್ಟು ಸಡಿಲಿಸದ  ಸೊಬರದಮಠ
‘ಮಹದಾಯಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗೋವಾ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನಮ್ಮ ಪ್ರಯತ್ನ ನಡೆಸಿದ್ದೇವೆ. ಉಪವಾಸ ಕೈಬಿಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಐದು ದಿನಗಳಿಂದ ಉಪವಾಸ ನಿರತ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದ ಮಠ ಅವರ ಮನವೊಲಿಕೆಗೆ ಯತ್ನಿಸಿದರು.

ಗುರುವಾರ ಧಾರವಾಡದಲ್ಲಿ ಆಯೋಜಿಸಲಾಗಿದ್ದ ವಿದ್ಯಾವರ್ಧಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು, ರೋಣದಲ್ಲಿ ಉಪವಾಸ ಮಾಡುತ್ತಿ ರುವ ಸೊಬರದಮಠ ಅವರಿಗೆ ಮೊಬೈಲ್‌ ಕರೆ ಮಾಡಿ, ಸತ್ಯಾಗ್ರಹ ನಿಲ್ಲಿಸುವಂತೆ ಮನವಿ ಮಾಡಿದರು.

‘ಮಹದಾಯಿ ಹೋರಾಟ ಆರಂಭವಾಗಿ ಎರಡು ವರ್ಷ ಕಳೆದಿದೆ. ನೀವು ಒಮ್ಮೆ ಕೂಡ ನರಗುಂದದ ಧರಣಿ ವೇದಿಕೆಗೆ ಬಂದಿಲ್ಲ. ಮೊದಲು ಇಲ್ಲಿಗೆ ಬನ್ನಿ, ನಂತರ ಉಪವಾಸ ಹಿಂಪಡೆಯುವ ಕುರಿತು ವಿಚಾರ ಮಾಡುತ್ತೇನೆ’ ಎಂದು ಸೊಬರದಮಠ ಅವರು ಪ್ರತಿಕ್ರಿಯಿಸಿದರು.

ಈಗ ಕಾರ್ಯಕ್ರಮದ ಒತ್ತಡ ದಲ್ಲಿದ್ದು, ಸರ್ಕಾರದ ಪ್ರತಿನಿಧಿಯಾಗಿ ಸಚಿವ ವಿನಯ ಕುಲಕರ್ಣಿ ಅವರನ್ನು ಕಳುಹಿಸುವುದಾಗಿ ಎಂದು ಸಿ.ಎಂ ಸಿದ್ದರಾಮಯ್ಯ ಹೇಳಿದರು.
ಆದರೆ, ಮಹದಾಯಿ ಧರಣಿ ವೇದಿಕೆಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ನಿರ್ಣಯವನ್ನು ತೆಗೆದುಕೊಂಡಿದ್ದು, ಇದರಿಂದ ಹಿಂದೆ ಸರಿಯುವುದಿಲ್ಲ ಎಂದು ಸೊಬರದಮಠ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.