ADVERTISEMENT

ಕೈಗೆ ಬಂದ ತುತ್ತು ಬಾಯಿಗಿಲ್ಲ!

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 10:00 IST
Last Updated 17 ನವೆಂಬರ್ 2017, 10:00 IST

ಗಜೇಂದ್ರಗಡ: ರಾಜ್ಯ ಸರ್ಕಾರ ನೇಕಾರರ ಸಾಲ ಮಾಡುವುದಾಗಿ ಘೋಷಿಸಿದೆ. ಆದರೆ, ಈ ಯೋಜನೆಯ ಲಾಭ ಗಜೇಂದ್ರಗಡ ಹಾಗೂ ಸುತ್ತಲಿನ ಹಳ್ಳಿಗಳಲ್ಲಿರುವ ನೇಕಾರರಿಗೆ ಲಭಿಸಿಲ್ಲ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಉಂಟಾಗಿದೆ.

ಪಟ್ಟಣದಲ್ಲಿರುವ ಸುಮಾರು 500 ಜನ ನೇಕಾರರು ಇಲ್ಲಿನ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡಿದ್ದಾರೆ. ಆದರೆ, ನೇಕಾರಿಕೆ ವೃತ್ತಿ ಎಂದರೆ ಯಾವುದೇ ಸಹಕಾರ ಸಂಘ, ಬ್ಯಾಂಕ್ ಸಾಲ ಕೊಡುವದಿಲ್ಲ ಎಂಬುದನ್ನು ಮನಗಂಡು ಸಾಲ ಪಡೆಯುವಾಗ ನೇಕಾರಿಕೆ ವೃತ್ತಿ ಎಂದು ನಮೂದಿಸದೇ, ಬೇರೆ ವೃತ್ತಿಯನ್ನು ನಮೂದಿಸಿದ್ದಾರೆ. ಇಲ್ಲಿನ ಪಾಡುರಂಗ ಸೊಸೈಟಿ, ಜಗದಂಬಾ ಸೊಸೈಟಿಯಂತಹ ಸಹಕಾರ ಬ್ಯಾಂಕುಗಳಲ್ಲಿ ಈ ರೀತಿ ಸಾಲ ಪಡೆಯಲಾಗಿದೆ. ಅಲ್ಲದೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಇಲ್ಲಿನ ನೇಕಾರರು ಸಾಲ ಪಡೆದಿದ್ದಾರೆ.

ಪ್ರಸತುತ ರಾಜ್ಯ ಸರ್ಕಾರ ಘೋಷಿಸಿದ ಸಾಲ ಮನ್ನಾ ಯೋಜನೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ನೇಕಾರಿಕೆ ಸಾಲಕ್ಕೆ ಅನ್ವಯವಾಗುವುದಿಲ್ಲ. ಇನ್ನುಳಿದಂತೆ ಸಹಕಾರ ಬ್ಯಾಂಕುಗಳಲ್ಲಿ ನೇಕಾರಿಕೆ ಉದ್ಯೋಗ ನಮೂದಿಸದೇ ಸಾಲ ಪಡೆದಿರುವುದರಿಂದ ಸಾಲ ಮನ್ನಾ ಯೋಜನೆಯ ಲಾಭ ಬಹುತೇಕ ನೇಕಾರ
ರಿಗೆ ಸಿಗದಂತಾಗಿದೆ.

ADVERTISEMENT

‘ಸರ್ಕಾರ ನೇಕಾರರಿಗೆ ಕಡ್ಡಾಯವಾಗಿ ಸಾಲ ನೀಡುವಂತೆ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಸಂಘಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ಹೀಗಾದಾಗ ಮಾತ್ರ ನೇಕಾರರ ಹಿತ ಕಾಯಬಹುದು ಹಾಗೂ ಸಾಲ ಮನ್ನಾ ಯೋಜನೆಯ ಲಾಭವನ್ನು ಅವರಿಗೆ ದೊರಕಿಸಬಹುದು’ ಎಂದು ಗಜೇಂದ್ರಗಡ ನೇಕಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೊಟ್ರೇಶ ಚಿಲಕಾ ಮತ್ತು ಕಾರ್ಯದರ್ಶಿ ಅಬ್ದುಲಸಾಬ್ ಕಾತರಕಿ ಒತ್ತಾಯಿಸಿದರು.

‘ನಾವು ಸಹಕಾರ ಬ್ಯಾಂಕುಗಳಲ್ಲಿ ಸಾಲ ಪಡೆಯುವಾಗ ಸಾಲ ಸಿಗಲಿ ಎಂಬ ಉದ್ದೇಶಕ್ಕಾಗಿ ಬೇರೆ ವೃತ್ತಿಯನ್ನು ನಮೂದಿಸಿದ್ದೆವು. ಈಗ ಅದೇ ಕಾರಣಕ್ಕಾಗಿ ನಮಗೆ ಸಾಲ ಮನ್ನಾ ಸೌಲಭ್ಯದ ಲಾಭ ಸಿಗದಂತಾಗಿದೆ’ ಎಂದು ನೇಕಾರರಾದ ನಾರಾಯಣ ಸಿಲೂರ, ಮದಾರಸಾಬ್ ಢಾಲಾಯತ ಮತ್ತು ಶರಣಪ್ಪ ಕುಂಬಾರ ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.