ADVERTISEMENT

‘ದೆಹಲಿ ಚಲೋ’ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಮೇ 2017, 6:47 IST
Last Updated 10 ಮೇ 2017, 6:47 IST
ಮುಂಡರಗಿ ಮಾರ್ಗವಾಗಿ ಹರಪನಹಳ್ಳಿಗೆ ನೂತನ ರೈಲು ಮಾರ್ಗ ಮಂಜೂರು ಮಾಡಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಕೈಗೊಂಡಿರುವ ‘ದೆಹಲಿ ಚಲೋ’ ಯಾತ್ರೆಗೆ ಹನುಮಂತಪ್ಪ ಹೆಗ್ಡಾಳ ಚಾಲನೆ ನೀಡಿದರು
ಮುಂಡರಗಿ ಮಾರ್ಗವಾಗಿ ಹರಪನಹಳ್ಳಿಗೆ ನೂತನ ರೈಲು ಮಾರ್ಗ ಮಂಜೂರು ಮಾಡಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಕೈಗೊಂಡಿರುವ ‘ದೆಹಲಿ ಚಲೋ’ ಯಾತ್ರೆಗೆ ಹನುಮಂತಪ್ಪ ಹೆಗ್ಡಾಳ ಚಾಲನೆ ನೀಡಿದರು   

ಮುಂಡರಗಿ: ಗದಗದಿಂದ ಮುಂಡರಗಿ, ಹೂವಿನಹಡಗಲಿ ಮಾರ್ಗವಾಗಿ ಹರಪನಹಳ್ಳಿಗೆ ನೂತನ ರೈಲು ಮಾರ್ಗ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ. ರೈಲ್ವೆ ಜಂಟಿ ಹೋರಾಟ ಸಮಿತಿ ಹಾಗೂ ತಾಲ್ಲೂಕು ಸರ್ವ ವ್ಯಾಪಾರಸ್ಥರ ಸಂಘದ ಕಾರ್ಯಕರ್ತರು ಮಂಗಳವಾರ ದೆಹಲಿಗೆ ತೆರಳಿದರು.

ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿ, ‘ಗದಗದಿಂದ –ಹರಪನಹಳ್ಳಿಗೆ ನೂತನ ರೈಲು ಮಾರ್ಗ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ನೂತನ ರೈಲು ಮಾರ್ಗ ಮಂಜೂರು ಮಾಡದೆ ಈ ಭಾಗದ ಜನತೆಗೆ ಅನ್ಯಾಯ ಮಾಡಿದೆದೆ’ ಎಂದು ಆರೋಪಿಸಿದರು.

‘ಸದಾನಂದಗೌಡರು ರೈಲ್ವೆ ಮಂತ್ರಿಯಾದ್ದಾಗ ನೂತನ ರೈಲು ಮಾರ್ಗ ಸಮೀಕ್ಷೆಗೆ ಮಂಜೂರಾತಿ ನೀಡಿದ್ದರು. ನಂತರ ಅದು ಕಾರಣಾಂತರಗಳಿಂದ ರದ್ದಾಯಿತು. ಇದರಿಂದಾಗಿ ಈ ಭಾಗದ ಜನತೆಗೆ ತೀವ್ರ ನಿರಾಸೆಯಾಗಿದ್ದು, ಕೇಂದ್ರ ಸರ್ಕಾರ ತಕ್ಷಣ ನೂತನ ರೈಲು ಮಾರ್ಗ ಮಂಜೂರಾತಿ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ನೂತನ ರೈಲು ಮರ್ಗ ಮಂಜೂರಾತಿ ನೀಡುವಂತೆ ಆಗ್ರಹಿಸಿ ಈಗಾಗಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಹಲವು ಬಾರಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಗಿತ್ತು’ ಎಂದು ಅವರು ತಿಳಿಸಿದರು.

ಎ.ಐ.ಮಾರನಬಸರಿ ಮಾತನಾಡಿ, ‘ನಮ್ಮ ಸುದೀರ್ಘ ಹೋರಾಟವನ್ನು ಗಮನಿಸಿರುವ ಪ್ರಧಾನಿ ಮೋದಿ ಅವರು ಇದೇ 11ರಂದು ಸಂಜೆ 4.30ಕ್ಕೆ ಹೋರಾಟಗಾರರನ್ನು ಭೇಟಿಯಾಗಲು ಸಮಯವನ್ನು ನಿಗದಿಗೊಳಿಸಿ ಪತ್ರ ಬರೆದಿದ್ದಾರೆ. ಅಂದು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ನೂತನ ರೈಲು ಮಾರ್ಗ ಮಂಜೂರು ಮಾಡಲು ಮನವಿ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

ವ್ಯಾಪಾರಿ ಹನುಮಂತಪ್ಪ ಹೆಗ್ಡಾಳ ದೆಹಲಿ ಚಲೋ ಯಾತ್ರೆಗೆ ಚಾಲನೆ ನೀಡಿದರು. ತಾಲ್ಲೂಕು ಸರ್ವ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರಕಾಶ ಕಾಲವಾಡ, ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ ಅಧ್ಯಕ್ಷ ಯಮುನಪ್ಪ ಭಜಂತ್ರಿ, ಕಾರ್ಯದರ್ಶಿ ಅಂದಾನಗೌಡ ಪಾಟೀಲ, ಬಸಪ್ಪ ವಡ್ಡರ, ಶೇಖರಗೌಡ ಪಾಟೀಲ, ವಿಶ್ವನಾಥ ಕಾಲವಾಡ, ಇಸ್ಮಾಯಿಲ್ ಘೋರಿ, ಮಂಜುನಾಥ ಕಾಲವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.