ADVERTISEMENT

ಪಕ್ಷಕ್ಕೆ ಕಾರ್ಯಕರ್ತರಿಂದ ಸೋಲಾಗಿಲ್ಲ: ಉದಾಸಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 6:30 IST
Last Updated 14 ನವೆಂಬರ್ 2017, 6:30 IST

ಗಜೇಂದ್ರಗಡ: ಕಳೆದ ಚುನಾವಣೆಯಲ್ಲಿ ಬಿಜೆಪಿ ಮೂರು ಭಾಗವಾಗಿದ್ದರಿಂದ ಸೋಲು ಅನುಭವಿಸಿತೇ ಹೊರತು, ಪಕ್ಷದ ಸೋಲಿಗೆ ಕಾರ್ಯಕರ್ತರು ಕಾರಣ ಅಲ್ಲ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಹೇಳಿದರು. ಸಮೀಪದ ಹಿರೇಕೊಪ್ಪ ಗ್ರಾಮದಲ್ಲಿ ಭಾನುವಾರ ನಡೆದ ಪರಿವರ್ತನಾ ರ‍್ಯಾಲಿಯ ಪೂರ್ವಬಾವಿ ಸಭೆ ಮತ್ತು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಾದ್ಯಂತ ಪರಿವರ್ತನಾ ರ‍್ಯಾಲಿ ಮೂಲಕ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾವೆಲ್ಲರೂ ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.

ಯೋಜನೆಗಳ ದುರುಪಯೋಗ ತಪ್ಪಿಸುವುದಕ್ಕಾಗಿ ಕೇಂದ್ರ ಸರ್ಕಾರ ಎಲ್ಲಾ ಯೋಜನೆಗಳನ್ನು ಆಧಾರ್‌ಗೆ ಲಿಂಕ್ ಮಾಡಿಸಲಾಗುತ್ತಿದೆ. ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇದು ಉತ್ತಮ ಹೆಜ್ಜೆಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ‘ಗರಿಬಿ ಹಠಾವೋ’ ಎಂಬುದು ಕೇವಲ ಘೋಷಣೆಯಷ್ಟೇ. ರಾಜ್ಯ ಕಾಂಗ್ರೆಸ್ ಸರ್ಕಾರ, ಬಡವರ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಬದ್ಧತೆ ಇಲ್ಲದವರ ಕೈಯಲ್ಲಿ ಆಡಳಿತ ಕೊಟ್ಟರೆ ಏನಾಗುತ್ತದೆ ಎಂಬುದಕ್ಕೆ ರಾಜ್ಯ ಸರ್ಕಾರ ಒಂದು ನಿದರ್ಶನವಾಗಿದೆ ಎಂದು ಟೀಕಿಸಿದರು.

ADVERTISEMENT

ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿದರು.ಇದೇ ವೇಳೆ ಗ್ರಾಮದ ಕೆಲ ಮುಖಂಡರು ಬಿಜೆಪಿ ಸೇರಿದರು. ಮುತ್ತಣ್ಣ ಲಿಂಗನಗೌಡ್ರ, ಶರಣಪ್ಪ ದೊಣ್ಣೆಗುಡ್ಡ, ಅಶೋಕ ವನ್ನಾಲ, ಬಾಸ್ಕರ ರಾಯಬಾಗಿ, ಬುಡ್ಡಪ್ಪ ಮೂಲಿಮನಿ, ದೊಡ್ಡನಗೌಡ ಗೌಡ್ರ, ದುರಗಪ್ಪ ಕಟ್ಟಿಮನಿ ಹಾಗೂ ಶರಣಪ್ಪ ಕಂಬಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.