ADVERTISEMENT

ಮಾರುಕಟ್ಟೆಯಲ್ಲಿ ಮಾವು ಕೇಳುವವರಿಲ್ಲ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 7:30 IST
Last Updated 21 ಏಪ್ರಿಲ್ 2017, 7:30 IST

ಗಜೇಂದ್ರಗಡ: ಹಣ್ಣುಗಳ ರಾಜನೆಂದೇ ಹೆಸರಾದ ಮಾವು ಪಟ್ಟಣಕ್ಕೆ ಬಂದಿದೆ. ಆದರೆ ವ್ಯಾಪಾರ ಇಲ್ಲದೆ ವ್ಯಾಪಾರಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.ಪಟ್ಟಣದಲ್ಲಿ 50ಕ್ಕೂ ಹೆಚ್ಚು ಹಣ್ಣಿನ ವ್ಯಾಪಾರಿಗಳಿದ್ದಾರೆ. ಪರಸ್ಪರ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಿದರೂ ಕನಿಷ್ಠ ಮಾರಾಟವೂ ಆಗುತ್ತಿಲ್ಲ. ದಿನದ ಕೂಲಿಯೂ ಹೊರಡುತ್ತಿಲ್ಲ ಎಂಬ ಆತಂಕ ವ್ಯಾಪಾರಿಗಳನ್ನು ಕಾಡುತ್ತಿದೆ.

ಜೋಡು ರಸ್ತೆಯಲ್ಲಿ ತಳ್ಳುವ ಗಾಡಿಯಲ್ಲಿ ಹಣ್ಣು ಮಾರುವ ಲೋಕೇಶ ಸತ್ಯಣ್ಣವರ ಮೂಲತಃ ಡಂಬಳದವರು. ಇಲ್ಲಿಗೆ ಬಂದು 20 ವರ್ಷಗಳಾಗಿವೆ. ಚಾಮರಾಜನಗರದಿಂದ ತಂದ ಮಾವನ್ನು ಕಣ್ಣು ಕುಕ್ಕುವಂತೆ ಜೋಡಿಸಿಟ್ಟು ಕಾಯುತ್ತಿದ್ದರೂ ಖರೀದಿಗೆ ಜನರೇ ಬರುತ್ತಿಲ್ಲ.‘ಪ್ರತಿ ಕೆ.ಜಿ. ಮಲ್ಲಿಕಾ ತಳಿಯ ಮಾವಿನ ಹಣ್ಣನ್ನು ₹ 20 ರಂತೆ ಖರೀದಿಸಿ, ₹ 8 ಸಾವಿರ ವಾಹನ ಬಾಡಿಗೆ ಕೊಡಲಾಗಿದೆ. ಇಲ್ಲಿ ಪ್ರತಿ ಕೆ.ಜಿ.ಗೆ ₹ 40 ರಂತೆ ಮಾರಾಟ ಮಾಡಲಾಗುತ್ತಿದೆ. ಆದರೆ ನಿರೀಕ್ಷೆಗೆ ತಕ್ಕಂತೆ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಇನ್ನೂ ಕಡಿಮೆ ಬೆಲೆಗೆ ಕೊಡುವಂತೆ ಚೌಕಾಸಿ ಮಾಡುವರು. ಹಣ್ಣು ನೋಡಲು ಗೋವಾ ತಳಿಯಂತಿದ್ದರೂ ಹೆಚ್ಚು ರುಚಿಯಾಗಿದೆ. ಬಹುತೇಕ ಜನರು ರೇಟು ಕೇಳಿ ಮುಂದೆ ಹೋಗುವರು’ ಎನ್ನುತ್ತಾರೆ ವ್ಯಾಪಾರಿ ಲೋಕೇಶ ಸತ್ಯಣ್ಣವರ.

ಪಟ್ಟಣಕ್ಕೆ ಬೇನಿಸ್‌, ಆಪೂಸ್ ಇನ್ನೂ ಬಂದಿಲ್ಲ. ದುಬಾರಿ ಬೆಲೆ ತೆತ್ತು ಹುಬ್ಬಳ್ಳಿ, ಗದಗ ನಗರಗಳಿಂದ ಖರೀದಿಸಿ ತಂದರೂ ಮಾರಾಟವಾಗಿದ್ದರೆ ನಷ್ಟದ ಹೊರೆ ಬೀಳುತ್ತದೆ. ಅಲ್ಲದೆ ಈ ಸಲ ಸರಿಯಾದ ಮಳೆಯಾಗದೆ ಮಾವಿನ ಫಸಲು ಕಡಿಮೆ ಇದೆ. ದಿನಕ್ಕೆ ಸುಮಾರು 50 ಕೆ.ಜಿಯಿಂದ ಒಂದು ಕ್ವಿಂಟಲ್ ಹಣ್ಣುಗಳು ಮಾರಾಟವಾಗುತ್ತವೆ. ಒಂದೊಂದು ದಿನ ವ್ಯಾಪಾರವೇ ಇರಲ್ಲ. ಹಣ್ಣು 5–6 ದಿನಗಳ ನಂತರ ಕೊಳೆಯುತ್ತದೆ. ವ್ಯಾಪಾರ ಇಲ್ಲದಿದ್ದರೆ ನಷ್ಟ ತಪ್ಪಿದ್ದಲ್ಲ. ಇದನ್ನೆಲ್ಲ ನೆನಪಿಸಿ ಕೊಂಡು ಹಣ್ಣು ಮಾರುವುದನ್ನು ಬಿಟ್ಟು ಹೊಟ್ಟೆ ಹೊರೆಯಲು ಹಳ್ಳಿ ಸುತ್ತೋದು ಒಳ್ಳೆಯದು ಅನಿಸುತ್ತದೆ ಎಂದು ವ್ಯಾಪಾರಿ ಇಮಾಮಸಾಬ್ ಮೂಲಿಮನಿ ಹೇಳುವರು.

ADVERTISEMENT

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಾವಿನ ಇಳುವರಿ ಕಡಿಮೆಯಾಗಿದೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಿಂದ ಮಾವು ಹುಬ್ಬಳ್ಳಿ, ಗದಗ, ಕೊಪ್ಪಳ ಮಾರುಕಟ್ಟೆಗೆ ಬಂದಿಲ್ಲ.  ಸುತ್ತಲಿನ ಜಿಲ್ಲೆಗಳಲ್ಲಿ ಬೆಳೆದ ಹಣ್ಣನ್ನು ಸಗಟು ವ್ಯಾಪಾರಸ್ಥರು ಖರೀದಿಸಿ, ಕಾರ್ಖಾನೆಗೆ ಕಳುಹಿಸಿದ್ದಾರೆ. ಅಲ್ಲದೆ ಈ ಬಾರಿ ಇಳುವರಿ ಕಡಿಮೆ ಇರುವ ಕಾರಣ ಬೆಲೆಯೂ ದುಬಾರಿ ಆಗಿದೆ. ಇದು ಗ್ರಾಮೀಣ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಗ್ರಾಹಕರ ಪಾಲಿಗೆ ಈ ಬಾರಿಯ ಸುಗ್ಗಿ ಹಿಗ್ಗು ತರುವಂತೆ ಇಲ್ಲ ಎಂದು ಇಮಾಮಸಾಬ್‌ ತಿಳಿಸಿದರು.

ಬರಗಾಲದಿಂದಾಗಿ ರೈತರ ಬಳಿ ದುಡ್ಡಿಲ್ಲ. ದುಡ್ಡಿದ್ದವರೂ ಹಣ್ಣು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ಮಳೆಯ ನಂತರ ಹಣ್ಣು ರುಚಿಯಾಗಿರುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ. ಇಲ್ಲಿ ವ್ಯಾಪಾರ ನಡೆಸುವುದು ಕಷ್ಟವಾಗುತ್ತಿದೆ. ಹಣ್ಣು ಮಾರೋದು ಬಿಟ್ಟು ಬೇರೆ ವ್ಯಾಪಾರ ಮಾಡೋದು ಉತ್ತಮ ಎನಿಸುತ್ತಿದ್ದಾರೆ ಎಂದು ವ್ಯಾಪಾರಸ್ಥರಾದ ಸಿದ್ದಪ್ಪ ಸತ್ಯಣ್ಣವರ ಮತ್ತು ಹನಮಪ್ಪ ಸತ್ಯಣ್ಣವರ ಹೇಳುವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.