ADVERTISEMENT

ಯೋಜನೆ ಅನುಷ್ಠಾನಕ್ಕೆ ಪ್ರಯತ್ನ: ಭರವಸೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 6:55 IST
Last Updated 19 ಜುಲೈ 2017, 6:55 IST

ನರಗುಂದ: ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ರೈತ ಸೇನೆರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದ ಮಠ ಅವರು  ಕೈಗೊಂಡ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿ (ಧರಣಿ 734ನೇ ದಿನ) ಸಂದರ್ಭದಲ್ಲಿ ಶಾಸಕ ಬಿ.ಆರ್‌.ಯಾವಗಲ್‌ ಹಾಗೂ ಮಾಜಿ ಶಾಸಕ ಸಿ.ಸಿ.ಪಾಟೀಲ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಉಪವಾಸ ಸತ್ಯಾಗ್ರಹ  ಕೈ ಬಿಡುವಂತೆ ಮನವಿ  ಮಾಡಿದರು.

ಶಾಸಕ ಬಿ.ಆರ್‌.ಯಾವಗಲ್‌ ಮಾತನಾಡಿ, ಮಹದಾಯಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇವೆ. ಹೋರಾಟದ ಬಗ್ಗೆ ಅರಿತಿದ್ದೇವೆ. ಇದು ನ್ಯಾಯ ಮಂಡಳಿಯಲ್ಲಿ ಇರುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಉಪವಾಸ ಕೈಗೊಂಡ ಮಾತ್ರಕ್ಕೆ ಇದು ಬೇಗನೇ ಆಗುವುದಿಲ್ಲ. ಪಕ್ಷಾತೀತವಾಗಿ  ಇದರ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು.  ಇದರ ಬಗ್ಗೆ ಸಂಬಂಧಿಸಿದ ಕಾಂಗ್ರೆಸ್‌ ನಾಯಕರ ಮೇಲೆ ಒತ್ತಡ ಹೇರಿ ಯೋಜನೆ ಜಾರಿಯಾಗುವ ಬಗ್ಗೆ ಪ್ರಯತ್ನ ನಡೆಸುತ್ತೇವೆ.  

ಆದ್ದರಿಂದ ಸೊಬರದ ಮಠ ಉಪವಾಸ ಕೈ ಬಿಡಬೇಕೆಂದು ಮನವಿ ಮಾಡಿದರು. ಮಾಜಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಈಗಾಗಲೇ ಮಹಾದಾಯಿ ಕಳಸಾ ಬಂಡೂರಿ ಹೋರಾಟಕ್ಕೆ ಆರಂಭದಿಂದಲೂ ಬೆಂಬಲಿಸಿದ್ದೇವೆ. ಇದು ರಾಜಕಾರಣಿಗಳು ಹಾಗೂ ಹೋರಾಟಗಾರರು ಕೂಡಿ ಅನುಷ್ಠಾನ ಗೊಳಿಸಬೇಕಿದೆ.

ADVERTISEMENT

ಆದ್ದರಿಂದ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವಲ್ಲಿ ಸೊಬರದಮಠ ಅವರು ಮುಂದಾಗಬೇಕು. ಈ ಯೋಜನೆ ಸಲುವಾಗಿ ಕೇಂದ್ರ ಮಟ್ಟದಲ್ಲಿ ಒತ್ತಡ ಹೇರಲು ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ ಹಾಗೂ ಸಂಸದರ ಜತೆ ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪಕ್ಷಾತೀತವಾಗಿ ಇದರ ಅನುಷ್ಠಾನಕ್ಕೆ ಹೆಚ್ಚಿನ ಒತ್ತಡ ಹಾಕುವುದಾಗಿ ಸಿ.ಸಿ. ಪಾಟೀಲ ಹೇಳಿದರು.

ಹಾಲಿ, ಮಾಜಿ ಶಾಸಕರ ಮನವಿಗೆ ಪ್ರತಿಕ್ರಿಯಿಸಿದ ವೀರೇಶ ಸೊಬರದಮಠ ನನ್ನ  ನಿರ್ಧಾರ ಅಚಲ. ಈಗಾಗಲೇ ನಿರ್ಣಯ ಕೈಗೊಂಡಿದ್ದೇನೆ. ತಮ್ಮ ಮನವಿಯನ್ನು ಆಲಿಸಿದ್ದೇನೆ. ನಾನು ಸದೃಢನಾಗಿದ್ದೇನೆ. ಹಿಂದಿನ ಕಹಿ ಘಟನೆ   ಗಳನ್ನು ಮರೆತು ಪಕ್ಷಾತೀತವಾಗಿ ಹೋರಾಡುವ ಪ್ರಯತ್ನ ಒಳ್ಳೆಯದಾಗಿದೆ. ಆದರೆ ಹೋರಾಟಗಾರನಾಗಿ ನಾನು ಸತ್ಯಾಗ್ರಹ ಕೈಗೊಂಡಿದ್ದೇನೆ. ತಾವುಗಳು ಪ್ರಾಮಾಣಿಕ ಪ್ರಯತ್ನ ಮಾಡಿ ಯೋಜನೆ ಅನುಷ್ಠಾನಗೊಳಿಸಿ ಎಂದರು.

ವೇದಿಕೆಯಲ್ಲಿ ಬಿಜೆಪಿ ಮುಖಂಡ ರಾದ ಮಲ್ಲಪ್ಪ ಮೇಟಿ, ಪುರಸಭೆ ಅಧ್ಯಕ್ಷ ಪ್ರಕಾಶ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಕಿರಣ  ಮುಧೊಳೆ, ಎ.ಎಂ. ಹುಡೇದ, ಎಂ.ಎಸ್‌. ಪಾಟೀಲ, ಚಂದ್ರು ದಂಡಿನ, ಶಿವನಗೌಡ ಹೆಬ್ಬಳ್ಳಿ,  ಜಿ.ಎಸ್‌. ಆದೆಪ್ಪ ನವರ, ಶರಣು ಕೋರಿ, ಕಾಂಗ್ರೆಸ್‌ ಮುಖಂಡರಾದ ರಾಜು ಕಲಾಲ, ಎಸ್‌.ಡಿ. ಕೊಳ್ಳಿಯವರ, ಪ್ರವೀಣ ಯಾವ ಗಲ್‌, ಜಿಲ್ಲಾ ಪಂಚಾಯಿತಿ ಸದಸ್ಯ ರಾಜುಗೌಡ ಕೆಂಚನಗೌಡ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ವಿಠ್ಠಲ ಶಿಂಧೆ, ಈಶ್ವರ ಚುಳಕಿ ಯಾವಗಲ್‌ನ ರಾಯಪ್ಪ ತಹ ಶೀಲ್ದಾರ್, ಮುತ್ತು ಕುರಿ, ಮಹಾದಾಯಿ ಹೋರಾಟ ಸಮಿತಿ ಸದಸ್ಯರು, ಯಾವ ಗಲ್‌, ಅರಿಸಿನಗೋಡಿ ಗ್ರಾಮದ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.