ADVERTISEMENT

ಸುಂದರ ಕಟ್ಟಡಕ್ಕೆ ಶೌಚಾಲಯವಿಲ್ಲ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:40 IST
Last Updated 18 ಏಪ್ರಿಲ್ 2017, 5:40 IST
ಗಜೇಂದ್ರಗಡದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಬಾಲಕಿಯರ ಪ್ರೌಢಶಾಲೆಯ ನೂತನ ಕಟ್ಟಡ
ಗಜೇಂದ್ರಗಡದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಬಾಲಕಿಯರ ಪ್ರೌಢಶಾಲೆಯ ನೂತನ ಕಟ್ಟಡ   

ಗಜೇಂದ್ರಗಡ: ಇಲ್ಲಿನ ಸರ್ಕಾರಿ ಪ.ಪೂ ಕಾಲೇಜ ಆವರಣದಲ್ಲಿ ನಿರ್ಮಾಣಗೊಂಡ ಪ್ರೌಢಶಾಲೆಗಳು ಈಗ ಉದ್ಘಾಟನೆಗಾಗಿ ಕ್ಷಣಗಣನೆಯಲ್ಲಿವೆ. ಇದೇ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲೆ ಕಟ್ಟಡ ಉದ್ಘಾಟಿಸುವ ಬಗ್ಗೆ ಮೂಲಗಳು ತಿಳಿಸುತ್ತಿವೆ. ಆದರೆ ಅಲ್ಲಿ ಮಕ್ಕಳಿಗೆ ಶೌಚಾಲಯಗಳೇ ಇಲ್ಲ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ಬಾಲಕ ಮತ್ತು ಬಾಲಕಿಯರ ಪ್ರೌಢ ಶಾಲೆಗಳಲ್ಲಿ ಶೌಚಾಲಯಗಳೆ ಇಲ್ಲದ ಬಗ್ಗೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸರ್ಕಾರದ ಯೋಜನೆಯಾದ ಬಾಲಕರ ಶಾಲೆಯನ್ನು ₹ 55ಲಕ್ಷ ವೆಚ್ಚದಲ್ಲಿ 8 ಕೊಠಡಿಗಳನ್ನು, ಬಾಲಕಿಯರ ಶಾಲೆಯನ್ನು ₹ 10 ಲಕ್ಷ ವೆಚ್ಚದಲ್ಲಿ 10 ಕೊಠಡಿಗಳನ್ನು ಆಂಧ್ರದ ಮೂಲದ ಗುತ್ತಿಗೆದಾರರು ನಿರ್ಮಿಸಿದ್ದಾರೆ.

ಆದರೆ ಇವುಗಳಲ್ಲಿ ಶೌಚಾಲಯಗಳೇ ಇಲ್ಲ. ಶಾಲೆ ಉದ್ಘಾಟನೆಯಾದರೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಬಯಲು ಶೌಚಾಲಯವನ್ನೆ ಅವಲಂಬಿಸಬೇಕು. ಸರ್ಕಾರವು ಶೌಚಾಲಯ ನಿರ್ಮಿಸುವಂತೆ ಸಾಕಷ್ಟು ಪ್ರಚಾರ ಮಾಡಿದರೂ ಗಮನ ಹರಿಸಿಲ್ಲ. ಮೂಲ ನೀಲನಕ್ಷೆಯಲ್ಲಿ ಶೌಚಾಲಯವಿದ್ದರೂ ಅದನ್ನು ನಿರಕ್ಷಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT

ಜೆಡಿಎಸ್ ಮುಖಂಡ ಎಚ್.ಎಸ್. ಸೋಂಪೂರ,‘ಬಾಲಕರು ಮತ್ತು ಬಾಲಕಿಯರಿಗೆ ಶಾಲೆ ಕಟ್ಟಬೇಕಾದರೆ ಮೂಲ ಸೌಲಭ್ಯವಾದ ಶೌಚಾಲಯಕ್ಕಾಗಿ ಕೋಟ್ಯಂತರ ಹಣ ಖರ್ಚು ಮಾಡಿದೆ. ಆದರೆ ಸರ್ಕಾರ ಮತ್ತು ಮೂಲ ನಕ್ಷೆಯನ್ನೇ ಕೈಬಿಟ್ಟು ಮನಬಂದಂತೆ ಕಟ್ಟಡ ನಿರ್ಮಿಸಲಾಗಿದೆ. ಶಾಲೆಯಲ್ಲಿ ಶೌಚಾಲಯ ಕಟ್ಟಿದ ನಂತರವೇ ಅದರ ಉದ್ಘಾಟನೆಗೆ ಅವಕಾಶ ನೀಡಲಾಗುವುದು. ಅಲ್ಲದೆ ಈಗಾಗಲೇ ಕಟ್ಟಡಕ್ಕೆ ಹೊಸದಾಗಿ ಹಾಕಿದ ಗ್ರಿಲ್ ಗಳು ಕಿತ್ತಿ ಹೋಗಿವೆ. ಇದನ್ನೆಲ್ಲ ಸರಿಪಡಿಸಬೇಕು. ಇಲ್ಲವಾದರೆ ಪ್ರತಿಭಟನೆ ಅನಿವಾರ್ಯ’ ಎಂದು ತಿಳಿಸಿದ್ದಾರೆ.

’ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ ಅಭಿಯಾನದಲ್ಲಿ ಪ್ರತಿ ಹಳ್ಳಯಲ್ಲಿ ಶೌಚಾಲಯ ಕಟ್ಟಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆಯಲ್ಲಿಯೇ ಶೌಚಾಲಯ ಇಲ್ಲದಿದ್ದರೆ, ಅಭಿಯಾನದ ಉದ್ದೇಶವನ್ನೇ ಕಡೆಗಣಿಸಿದಂತಾಗುತ್ತದೆ. ಅದೇನೇ ಇದ್ದರೂ ಶಾಲೆಯಲ್ಲಿ ಶೌಚಾಲಯ ನಿರ್ಮಿಸಿದ ನಂತರವೇ ಉದ್ಘಾಟನೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವರಾಜ ಹೊಸಮನಿ ಹೇಳುವರು.
ಡಾ. ಮಲ್ಲಿಕಾರ್ಜುನ ಕುಂಬಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.