ADVERTISEMENT

‘ಗಿಡ ಕಡಿಯಲು ಮುಂದಾದರೆ ಅಪ್ಪಿಕೊ ಚಳವಳಿ’

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 7:04 IST
Last Updated 1 ಸೆಪ್ಟೆಂಬರ್ 2014, 7:04 IST

ಮುಂಡರಗಿ: ಗದಗ–ಮುಂಡರಗಿ ಮಧ್ಯದಲ್ಲಿ ರಾಜ್ಯ ಹೆದ್ದಾರಿ ನಿರ್ಮಿಸುವ ಉದ್ದೇಶದಿಂದ ರಸ್ತೆಯ ಅಕ್ಕ ಪಕ್ಕದಲ್ಲಿದ್ದ ಸುಮಾರು 800 ದೊಡ್ಡ ಮರಗಳ ಈಗಾಗಲೇ ಕಡಿದುಹಾಕಲಾಗಿದೆ ಎಂದು ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ತಿಳಿಸಿದ್ದಾರೆ.

ಈಗ ನಿರ್ಮಿಸಿರುವ ರಾಜ್ಯ ಹೆದ್ದಾರಿ ಮೊದಲಿನ ರಸ್ತೆಯಷ್ಟೆ ಅಗಲವಿದ್ದು, ಅದಕ್ಕಾಗಿ ಮರಗಿಡಗಳನ್ನು ಕಡಿಯುವ ಅಗತ್ಯ ವಿರಲಿಲ್ಲ. ಈಗ ಮುಂಡರಗಿ ಯಿಂದ–ಹರಪನಹಳ್ಳಿವರೆಗೆ ರಾಜ್ಯ ಹೆದ್ದಾರಿ ವಿಸ್ತರಿಸಲು ಟೆಂಡರ್ ಕರೆಯಲಾಗಿದೆ. ರಸ್ತೆ ವಿಸ್ತರಣೆ ನೆಪದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿರುವ ಮರಗಳನ್ನು ಕಡಿಯಲಾಗುವುದು ಎಂದು ತಿಳಿದುಬಂದಿದ್ದು, ಮರ ಗಳನ್ನು ಕಡಿಯಲು ಮುಂದಾದರೆ ಅಪ್ಪಿಕೋ ಚಳವಳಿ ಕೈಗೊಳ್ಳಲಾಗುವುದು  ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ರಸ್ತೆ ಅಗಲೀಕರಣದ ನೆಪದಲ್ಲಿ ಬ್ರಿಟಿಷರ ಕಾಲದಲ್ಲಿ ಹಚ್ಚಲಾಗಿದ್ದ ನೂರಾರು ಗಿಡಗಳನ್ನು ಕಡೆದು ಹಾಕಲಾಗಿದೆ. ಈಗ ನಿರ್ಮಿಸಿರುವ ರಸ್ತೆಯ ಅಗಲವನ್ನು ಗಮನಿಸಿದರೆ ರಸ್ತೆಯ ಬದಿಯಲ್ಲಿದ್ದ ಗಿಡಮರಗಳನ್ನು ಕಡಿಯುವ ಅಗತ್ಯವಿರುತ್ತಿರಲಿಲ್ಲ. ಮುಂಡರಗಿ ಹರಪನಹಳ್ಳಿ ಮಾರ್ಗದಲ್ಲಿಯೂ ಇಷ್ಟೇ ಅಗಲದ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿದುಬಂದಿದ್ದು, ಅದಕ್ಕಾಗಿ ಗಿಡಗಳನ್ನು ಕಡಿಯುವ ಅವಶ್ಯಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬಳ್ಳಾರಿಯಿಂದ ಕಾರವಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿದ್ದ ಮರಗಳನ್ನು ಹಾಗೆಯೇ ಉಳಿಸಿಕೊಂಡು ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಆದ್ದರಿಂದ ಮುಂಡರಗಿ ಹರಪನಹಳ್ಳಿ ಮಾರ್ಗ ಮಧ್ಯದಲ್ಲಿಯೂ ರಸ್ತೆಯ ಬದಿಯಲ್ಲಿರುವ ಮರಗಳನ್ನು ಕಡಿಯದೇ ಅವುಗಳನ್ನು ಉಳಿಸಿಕೊಂಡು ರಸ್ತೆ ನಿರ್ಮಾಣ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಾರ್ವಜನಿಕರ ಮನವಿಗೆ ಸ್ಪಂದಿಸದೆ ಮರಗಳನ್ನು ಕಡೆಯಲು ಮುಂದಾದರೆ ಮರಗಳನ್ನು ಅಪ್ಪಿಕೊಂಡು ಅಪ್ಪಿಕೋ ಚಳವಳಿಯ ಮಾದರಿಯಲ್ಲಿ ಬೃಹತ್‌ ಚಳವಳಿ ಪ್ರಾರಂಭಿಸಲಾಗುವುದು. ಹೊಸದಾಗಿ ನಿರ್ಮಾಣವಾಗಲಿರುವ ರಾಜ್ಯ ಹೆದ್ದಾರಿಯ ಎರಡೂ ಬದಿಯಲ್ಲಿರುವ ಯಾವುದೇ ಮರಕ್ಕೂ ದಕ್ಕೆಯಾಗ ದಂತೆ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.
ಮುಖಂಡರಾದ ಈಶ್ವರಪ್ಪ ಹಂಚಿನಾಳ, ರಾಮ ಚಂದ್ರ ಗಾರವಾಡ, ಎಸ್.ವಿ.ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT