ADVERTISEMENT

ಹೆಚ್ಚಿದ ತೊಗರಿ ಬಿತ್ತನೆ ಪ್ರದೇಶ: ಅಧಿಕ ಇಳುವರಿ

ನಾಗರಾಜ ಹಣಗಿ
Published 19 ಜನವರಿ 2018, 9:47 IST
Last Updated 19 ಜನವರಿ 2018, 9:47 IST
ಲಕ್ಷ್ಮೇಶ್ವರ ಸಮೀಪದ ಸೂರಣಗಿ ಗ್ರಾಮದ ಯುವ ರೈತ ಈರಣ್ಣ ಶೀರನಹಳ್ಳಿ ಅವರ ಹೊಲದಲ್ಲಿ ಕೊಯ್ಲಿಗೆ ಬಂದಿರುವ ತೊಗರಿ
ಲಕ್ಷ್ಮೇಶ್ವರ ಸಮೀಪದ ಸೂರಣಗಿ ಗ್ರಾಮದ ಯುವ ರೈತ ಈರಣ್ಣ ಶೀರನಹಳ್ಳಿ ಅವರ ಹೊಲದಲ್ಲಿ ಕೊಯ್ಲಿಗೆ ಬಂದಿರುವ ತೊಗರಿ   

ಲಕ್ಷ್ಮೇಶ್ವರ: ಈ ವರ್ಷ ತಾಲ್ಲೂಕಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ರೈತರು ತೊಗರಿ ಬಿತ್ತನೆ ಕೈಗೊಂಡಿದ್ದಾರೆ. ಬೆಳೆಯೂ ಚೆನ್ನಾಗಿ ಬಂದಿದ್ದು ರೈತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.

ಮೊದಲು ಈ ಭಾಗದ ರೈತರು ಜೋಳ, ಬಳ್ಳಿಶೇಂಗಾ ಬೆಳೆಯಲ್ಲಿ ತೊಗರಿಯನ್ನು ಅಂತರ ಬೆಳೆಯನ್ನಾಗಿ ಬೆಳೆಯುತ್ತಿದ್ದರು. ಆದರೆ ಈಚಿನ ದಿನಗಳಲ್ಲಿ ಕೆಲ ಯುವ ರೈತರು ತೊಗರಿ ಕಣಜ ಎಂದೇ ಹೆಸರುವಾಸಿ ಆಗಿರುವ ಕಲಬುರ್ಗಿಯಿಂದ ವಿವಿಧ ನಮೂನೆಯ ತೊಗರಿ ಬೀಜಗಳನ್ನು ಖರೀದಿಸಿ ಈ ಭಾಗದಲ್ಲಿ ಬಿತ್ತನೆ ಮಾಡುತ್ತಿದ್ದಾರೆ. ಹೀಗಾಗಿ ತೊಗರಿ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಲೇ ಇದೆ.

ಅದರಂತೆ ಈ ಬಾರಿ ತಾಲ್ಲೂಕಿನಾದ್ಯಂತ 2,000 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಆಗಿದ್ದು ರೈತರು ಹೆಚ್ಚಿನ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ಲಕ್ಷ್ಮೇಶ್ವರ ಸಮೀಪದ ಸೂರಣಗಿ ಗ್ರಾಮದ ಈರಣ್ಣ ಶೀರನಹಳ್ಳಿ ಎಂಬ ರೈತ ಈ ಸಲ 12 ಎಕರೆಯಲ್ಲಿ ಸಂಪೂರ್ಣವಾಗಿ ತೊಗರಿಯನ್ನು ಬೆಳೆದು ಉಳಿದ ರೈತರು ಹುಬ್ಬೇರಿಸುವ ಸಾಹಸ ಮಾಡಿದ್ದಾರೆ.

ADVERTISEMENT

ದಕ್ಕದ ಬೆಂಬಲ ಬೆಲೆ: ಕೇಂದ್ರ ಸರ್ಕಾರ ಈಗಾಗಲೇ ಒಂದು ಕ್ವಿಂಟಲ್‌ ತೊಗರಿಗೆ ₹6,000 ಬೆಂಬಲ ಘೋಷಿಸಿದೆ. ಆದರೆ ಈ ಸೌಲಭ್ಯ ತೊಗರಿ ಬೆಳೆಯುವ ಕಲಬುರ್ಗಿ, ಕೊಪ್ಪಳ, ರಾಯಚೂರು, ಸಿಂಧನೂರು ಭಾಗದ ರೈತರಿಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ ನಮ್ಮ ಭಾಗದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

ಲಕ್ಷ್ಮೇಶ್ವರದ ಮಾರುಕಟ್ಟೆಯಲ್ಲಿ ಸದ್ಯ ಪ್ರತಿ ಕ್ವಿಂಟಲ್‌ಗೆ ₹3,000ರಿಂದ ₹3,500ವರೆಗೆ ತೊಗರಿ ಮಾರಾಟ ಆಗುತ್ತಿದೆ. ಕಾರಣ ಇದನ್ನು ಬೆಳೆದ ನಮ್ಮ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

‘ಬೆಂಬಲ ಬೆಲೆ ಸಿಗದೆ ನಮ್ಮ ಭಾಗದ ರೈತರು ನಷ್ಟದಲ್ಲಿದ್ದಾರೆ. ಕಾರಣ ನಮಗೂ ಬೆಂಬಲ ಬೆಲೆ ನೀಡಬೇಕು’ ಎಂದು ಸೂರಣಗಿಯ ಬಸವರಾಜ ಇಟಗಿ, ಉಡೇನಹಳ್ಳಿ ಗ್ರಾಮದ ಬಸವರಾಜ ಅಂಗಡಿ ಹಾಗೂ ಲಕ್ಷ್ಮೇಶ್ವರದ ಬಸಣ್ಣ ಬೆಂಡಿಗೇರಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.