ADVERTISEMENT

ಅನೈತಿಕ ಚಟುವಟಿಕೆ ಕೇಂದ್ರವಾದ ಜ್ಞಾನ ದೇಗುಲ

ಮುಚ್ಚಿರುವ ಶಾಲೆಗಳ ಬಗ್ಗೆ ನಿರ್ಲಕ್ಷ್ಯ, ದಾಖಲೆಗಳ ನಾಶ: ಆರೋಪ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 9:30 IST
Last Updated 9 ಮಾರ್ಚ್ 2017, 9:30 IST
ಅರಕಲಗೂಡು: ತಾಲ್ಲೂಕಿನಲ್ಲಿ ಮಕ್ಕಳ ಕೊರತೆಯಿಂದ ಮುಚ್ಚಲಾಗಿರುವ ಶಾಲೆಗಳ ನಿರ್ವಹಣೆ ಕುರಿತು ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರು ನಿಗಾ ವಹಿಸದ ಪರಿಣಾಮ ಶಾಲಾ ಕಟ್ಟಡಗಳು ಅನೈತಿಕ ಚಟುವಟಿಕೆಗಳ ಕೇಂದ್ರಗಳಾಗಿವೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ಬಿ.ಸಿ.ರಾಜೇಶ್‌ ಆರೋಪಿಸಿದರು.
 
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 15 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಮಕ್ಕಳ ಕೊರತೆಯ ಕಾರಣ ನೀಡಿ ಮುಚ್ಚಲಾಗಿದೆ ಎಂದು ಹೇಳಿದರು.
 
ಇಲ್ಲಿಗೆ ಬರುತ್ತಿದ್ದ ಕೆಲವೇ ಮಕ್ಕಳನ್ನು ಸಮೀಪದ ಶಾಲೆಗಳಿಗೆ ಸೇರ್ಪಡೆ ಮಾಡಿದ್ದು ಶಿಕ್ಷಕರನ್ನು ಸಹ ಬೇರೆ ಶಾಲೆಗಳಿಗೆ ವರ್ಗಾಯಿಸಲಾಗಿದೆ. ಆದರೆ, ಶಾಲಾ ಕಟ್ಟಡ, ಪೀಠೋಪಕರಣ, ಮಕ್ಕಳು ಹಾಗೂ ಶಾಲೆಯ ದಾಖಲಾತಿಗಳು, ಅಕ್ಷರದಾಸೋಹ ಉಪಕರಣಗಳನ್ನು ಇಲ್ಲಿಯೇ ಬಿಟ್ಟು ಶಾಲೆಗೆ ಬೀಗ ಹಾಕಲಾಗಿದೆ.

ಶಿಕ್ಷಕರಾಗಲಿ, ಶಿಕ್ಷಣ ಇಲಾಖೆ ಅಧಿಕಾರಿಗಳಾಗಲಿ ಮತ್ತೆ ಇತ್ತ ತಿರುಗಿಯೂ ನೋಡದ ಕಾರಣ ಶಾಲಾ ಕಟ್ಟಡಗಳು ಪುಂಡು–ಪೋಕರಿಗಳ ಅನೈತಿಕ ಚಟುವಟಿಕೆಯ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ಆರೋಪಿಸಿದರು. 
 
ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿ ಹೊಂಡರವಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಮಕ್ಕಳ ಕೊರತೆಯ ಕಾರಣದಿಂದ ಮುಚ್ಚಿ ಒಂದು ವರ್ಷ ಕಳೆದಿದೆ. 6 ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಿಸಲಾಗಿತ್ತು. ಈಗ ಶಾಲೆಯ ಬೀಗ ಮುರಿದಿರುವ ಪುಂಡರು ಬೀರು ಬಾಗಿಲು ಒಡೆದು ದಾಖಲೆಗಳನ್ನು ಹರಿದು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ. 
 
ಶಾಲೆಯ ಗೋಡೆಗಳ ಮೇಲೆ ಚಿತ್ರಿಸಿದ್ದ ರಾಷ್ಟ್ರ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿದ್ದಾರೆ ಎಂದು ಅವರು ಆರೋಪಿಸಿದರು. ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಶಾಲೆ ಮುಚ್ಚಿದ ಬಳಿಕ ಶಾಲಾಭಿವೃದ್ಧಿ ಸಮಿತಿಗಾಗಲೀ ಸಂಬಂಧಿಸಿದ ಗ್ರಾಮ ಪಂಚಾಯಿತಿಗಾಗಲಿ ಶಾಲಾ ನಿರ್ವಹಣೆಯನ್ನು ವಹಿಸುವ ಕನಿಷ್ಠ ಜವಾಬ್ದಾರಿಯನ್ನೂ ಇಲಾಖೆ ನಿರ್ವಹಿಸಿಲ್ಲ ಎಂದು ಅವರು ಟೀಕಿಸಿದರು. 
 
ಶಾಲೆಗೆ ಮಕ್ಕಳು ಬಾರದಿರಲು ಕಾರಣವೇನು, ಶಿಕ್ಷಣದ ಗುಣಮಟ್ಟ ಯಾವ ರೀತಿ ಇದೆ ಎಂಬ  ಕುರಿತು ಸರ್ಕಾರ ಚಿಂತನೆ ನಡೆಸದ ಕಾರಣ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು, ಗ್ರಾಮೀಣ ಪ್ರದೇಶದ ಬಡವರು, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಲಿಕೆಯಿಂದ ಹೊರಗುಳಿಯುತ್ತಿದ್ದಾರೆ.

ತಾಲ್ಲೂಕಿನಲ್ಲಿ ಮುಚ್ಚಿರುವ ಎಲ್ಲ ಶಾಲೆಗಳ ಸ್ಥಿತಿಯೂ ಇದೇ ಆಗಿದ್ದು ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಈ ಕುರಿತು ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಪಕ್ಷದ ಮುಖಂಡರಾದ ಚಂದ್ರಪ್ಪ, ರಾಜಣ್ಣ ಗೋಷ್ಠಿಯಲ್ಲಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.