ADVERTISEMENT

ಕಂದಾಯ ನಿರೀಕ್ಷಕನ ಅಮಾನತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 7:42 IST
Last Updated 22 ಜೂನ್ 2017, 7:42 IST

ಹಾಸನ: ‘ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಕಡೆಗರ್ಜಿ ಗ್ರಾಮದ ಪರಿಶಿಷ್ಟರ ಹಿಡುವಳಿ ಭೂಮಿಯನ್ನು  ಸವರ್ಣಿಯರಿಗೆ ಮಂಜೂರು ಮಾಡಿರುವ ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಶಿಸ್ತು  ಕ್ರಮ ತೆಗೆದುಕೊಳ್ಳುವಂತೆ‘ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. 

‘ಕಂದಾಯ ನಿರೀಕ್ಷಕ ದೊರೆಸ್ವಾಮಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ನಾರಾಯಣ ಕಡೆಗರ್ಜಿ ಗ್ರಾಮದ ಪರಿಶಿಷ್ಟರು ಹಿಡುವಳಿ ಮಾಡುತ್ತಿದ್ದ ಸರ್ವೆ ನಂ. 22, 32, 33, 34, 37, 38 ಹಾಗೂ 41 ರ 37.30 ಎಕರೆ ಜಮೀನನ್ನು ಸವರ್ಣೀಯರಿಗೆ ಮಂಜೂರು ಮಾಡಿಕೊಟ್ಟಿದ್ದು, ಈ ಬಗ್ಗೆ  ಪರಿಶೀಲನೆ ಮಾಡಿ ತಪ್ಪಿತಸ್ಥ ಅಧಿಕಾರಿ ಗಳನ್ನು ಅಮಾನತು ಮಾಡಬೇಕು’ ಎಂದು ಜಿಲ್ಲಾಡಳಿತಕ್ಕೆ ಬುಧವಾರ ಮನವಿ ನೀಡಿದರು.

‘ಪರಿಶಿಷ್ಟ ಸಮುದಾಯಕ್ಕೆ ಸೇರಿದ 16 ಕುಟುಂಬಗಳಿಗೆ 1982 – 83ರಲ್ಲೇ ಭೂಮಿ ಮಂಜೂರಾಗಿತ್ತು. 60 ವರ್ಷಗ ಳಿಂದಲೂ ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದೇವೆ. ಹೀಗಿರುವಾಗ ಪಕ್ಕದ ಜಮೀನಿನ  ಕಲ್ಲಹಳ್ಳಿಯ ದೇವಿಪ್ರಸಾದ್, ಕೋಗಿಲಮನೆಯ ಸತ್ಯನಾರಾಯಣ, ಹಿರಿಗರ್ಜೆ ಕೊಪ್ಪಲು ನಿವಾಸಿ ಸುರೇಶ ಹಾಗೂ ನಂಜೇಗೌಡ ಅವರು ದಲಿತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆ’ ಎಂದು ದೂರಿದರು.

ADVERTISEMENT

‘ಹಣದ ಆಸೆಗೆ ಅಧಿಕಾರಿಗಳು ಈ ರೀತಿ ಮಾಡಿದ್ದು, ಇದರಿಂದ ದಲಿತರಿಗೆ ಅನ್ಯಾಯವಾಗಿದೆ. ದಲಿತರು ಜೀವನ ನಡೆಸಲು ಇದೇ ಭೂಮಿ ನೆಚ್ಚಿಕೊಂಡಿ ದ್ದಾರೆ.  ಆದ್ದರಿಂದ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು. ಗ್ರಾಮಸ್ಥರಾದ ಕಾಳಯ್ಯ, ನಿಂಗಮ್ಮ, ಹರೀಶ್‌, ರಮೇಶ್‌, ಸುರೇಶ್, ಮೈಲಾರಯ್ಯ, ರಾಜು, ಈರಯ್ಯ, ಭದ್ರಯ್ಯ, ಮಲ್ಲೇಶ, ದಲಿತ ಮುಖಂಡ ಹೆತ್ತೂರು ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.