ADVERTISEMENT

ಕಾಡಾನೆಗಳ ದಾಳಿ: ಗ್ರಾಮಸ್ಥರಲ್ಲಿ ತೀವ್ರ ಆತಂಕ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 10:53 IST
Last Updated 6 ಮಾರ್ಚ್ 2015, 10:53 IST

ಅರಸೀಕೆರೆ: ನಗರ ಹೊರ ವಲಯದಲ್ಲಿರುವ ಕಂತೇನಹಳ್ಳಿ ಕೆರೆ ಬಳಿ ಗುರುವಾರ ಬೆಳಿಗ್ಗೆ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ. ಇದರಿಂದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರು, ಕಾಡಂಚಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆಮಾಡಿದೆ.

ಕಳೆದ ಒಂದು ವಾರದಿಂದ ತುಮಕೂರು ಜಿಲ್ಲೆಯ ಕೆಲವು ಗ್ರಾಮಗಳಿಗೆ ನುಗ್ಗಿ ಗ್ರಾಮಸ್ಥರನ್ನು ಭೀತಿಗೊಳಿಸಿದ್ದ 6 ಕಾಡಾನೆಗಳ ಪೈಕಿ ಎರಡು ಕಾಡಾನೆಗಳು ಗುಂಪಿನಿಂದ ತಪ್ಪಿಸಿಕೊಂಡು ಪಟ್ಟಣದತ್ತ ಮುಖ ಮಾಡಿವೆ. ಗುರುವಾರ ನಸುಕಿನ 3.30ರ ಸಮಯದಲ್ಲಿ ತಾಲ್ಲೂಕಿನ ಗಡಿ ಭಾಗವಾದ ರಂಗಾಪುರ ಕಾವಲ್‌ ಬಳಿ ಇರುವ ಮೊರಾರ್ಜಿ ವಸತಿ ಶಾಲೆ ಬಳಿ ಎರಡು ಆನೆಗಳು ಕಾಣಿಸಿಕೊಂಡಿವೆ.

ನಸುಕಿನ 4.30 ಗಂಟೆಗೆ ಕಂತೇನಹಳ್ಳಿ ಕೆರೆ ಮುಂಭಾಗದ ತೋಟದಲ್ಲಿ ಕಾಣಿಸಿಕೊಂಡಿವೆ. ಆನೆಗಳನ್ನು ಕಂಡ ರೈತ ತಕ್ಷಣ ಈ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ.

ತಕ್ಷಣ ಕಾರ್ಯ ಪ್ರವೃತ್ತರಾದ ತಾಲ್ಲೂಕು ವಲಯ ಅರಣ್ಯಾಧಿಕಾರಿ ಹುಸೇನಿ ತಮ್ಮ ಸಿಬ್ಬಂದಿಯೊಡನೆ ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲಿ ಕಾಡಾನೆಗಳು ಕಸ್ತೂರಬಾ ಶಿಬಿರದ ಪಕ್ಕದಲ್ಲಿ ಹಾದು ತಿರುಪತಿ ಹಳ್ಳಿ ಬಳಿಯಿರುವ ಕಬ್ಬಿನ ಗದ್ದೆಗೆ ದಾಳಿಯಿಟ್ಟು ಸಾಕಷ್ಟು ಕಬ್ಬು ತಿಂದಿವೆ. ಮುಂದೆ ಎಡ್ವರ್ಡ್‌ ಎಂಬುವರ ತೋಟಕ್ಕೆ ಹಾಕಿದ್ದ ಕಬ್ಬಿಣದ ಗೇಟ್‌ ಮುರಿದು ಒಳನುಗ್ಗಿದ ಆನೆಗಳು 25ಕ್ಕೂ ಬಾಳೆ ಗಿಡಗಳನ್ನು ಹಾಳುಮಾಡಿವೆ. ನಂತರ ಪಕ್ಕದ ತೋಟಕ್ಕೆ ಹಾಕಿದ್ದ ತಂತಿ ಬೇಲಿಯನ್ನು ಮುರಿದುಕೊಂಡು ಹಬ್ಬನಘಟ್ಟ ಕಾವಲಿನತ್ತ ಪ್ರಯಾಣ ಬೆಳೆಸಿದವು.

ಕಾಡಾನೆಗಳ ಹೆಜ್ಜೆ ಗುರುತಿನ ಜಾಡು ಹಿಡಿದು ಅವುಗಳನ್ನು ಪತ್ತೆಹಚ್ಚಿ ಕಾಡಿಗಟ್ಟುವ ಪ್ರಯತ್ನದಲ್ಲಿದ್ದೇವೆ ಎಂದು ವಲಯ ಅರಣ್ಯಾಧಿಕಾರಿ ಹುಸೇನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.