ADVERTISEMENT

ಕೃಷಿ ತಾಂತ್ರಿಕ ಮಾಹಿತಿಗೆ ಅಭಿಯಾನ ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 6:19 IST
Last Updated 16 ಜೂನ್ 2017, 6:19 IST
ಮೆರವಣಿಗೆಯಲ್ಲಿ ಕನಕೇನಹಳ್ಳಿಯ ಕೃಷಿಕ ಮಹಿಳೆಯರು ಕಳಸಹೊತ್ತು ಸಾಗಿದರು
ಮೆರವಣಿಗೆಯಲ್ಲಿ ಕನಕೇನಹಳ್ಳಿಯ ಕೃಷಿಕ ಮಹಿಳೆಯರು ಕಳಸಹೊತ್ತು ಸಾಗಿದರು   

ಹಳೇಬೀಡು: ರೈತರಿಗೆ ಕೃಷಿ ತಾಂತ್ರಿಕತೆ ಹಾಗೂ ಮಣ್ಣಿನ ಫಲವತ್ತತೆ ಕಾಪಾಡುವ ಬಗ್ಗೆ ತಿಳಿಸಲು ಸಮಗ್ರ ಕೃಷಿ ಅಭಿಯಾನ ಅಗತ್ಯವಾಗಿದೆ. ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಸಂಗ್ರಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಲತಾ ದಿಲೀಪ್‌ಕುಮಾರ್‌ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಹಳೇಬೀಡು ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಮೀನಿನಲ್ಲಿ ಫಲವತ್ತಾದ ಮಣ್ಣು ಇದ್ದರೆ ಮಾತ್ರ ಉತ್ತಮ ಫಸಲು ಬರಲು ಸಾಧ್ಯ. ರೈತರು ಕೃಷಿ ಇಲಾಖೆಯ ಸಹಾಯ ಪಡೆದು ಮಣ್ಣಿನ ಸಂರಕ್ಷಣೆಯ ಕ್ರಮ ಕೈಗೊಳ್ಳಬೇಕು. ತಮ್ಮ ಭೂಮಿಗೆ ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ರಸಗೊಬ್ಬರ ಬಳಕೆ ಮಾಡಬೇಕು. ರಸಗೊಬ್ಬರ ಬಳಕೆ ಮಾಡುವ ಮೊದಲು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎನ್‌.ತಮ್ಮಣ್ಣಗೌಡ (ಅಶ್ವತ್‌) ಮಾತನಾಡಿ, ಮಣ್ಣಿನ ಸುರಕ್ಷತೆ ಕಾಪಾಡಲು ಕೃಷಿ ಇಲಾಖೆ  ಮಣ್ಣು ಆರೋಗ್ಯ ಅಭಿಯಾನ ಆಯೋಜಿಸಿದೆ. ರೈತರು ಅಭಿಯಾನದ ಸುದುಪಯೋಗ ಮಾಡಿಕೊಳ್ಳಬೇಕು. ಅಲ್ಲದೆ ಅಂತರ್ಜಲ ಕಾಪಾಡುವ ನಿಟ್ಟಿನಲ್ಲಿಯೂ ರೈತರು ಆಸಕ್ತಿ ತೋರಬೇಕು. ಮರಗಳನ್ನು ಬೆಳೆಸಿದರೆ ಭೂಮಿಯಲ್ಲಿ ಫಲವತ್ತತೆ ಹೆಚ್ಚುತ್ತದೆ. ಅಲ್ಲದೆ ಭೂಮಿಯಲ್ಲಿನ ತೇವಾಂಶ ಕಾಪಾಡುವುದಕ್ಕೂ ಅನುಕೂಲವಾಗುತ್ತದೆ ಎಂದರು.

ಕೃಷಿ ವಿಜ್ಞಾನಿಗಳಾದ ಡಾ.ಎಂ.­ಶಿವಶಂಕರ್‌ ಹಾಗೂ ಡಾ.ಎಸ್‌.­ಚನ್ನಕೇಶವ ಅವರು ರೈತರೊಂದಿಗೆ ಸಂವಾದ ನಡೆಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಲತಾ ಮಂಜೇಶ್ವರಿ ದೇವುಪ್ರಸಾದ್‌, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗಂಗೂರು ರಂಗೇಗೌಡ, ಸುಮಾ ಎಚ್‌.ಪರಮೇಶ್, ಪಿ.ಎಸ್‌.ಹರೀಶ್‌ ಇಂದಿರಾ ರವಿಕುಮಾರ್‌ ಸಹಾಯಕ ಕೃಷಿ ನಿರ್ದೇಶಕ ಕೆ.ಆರ್‌.ಮಲ್ಲೇಶಗೌಡ, ಕೃಷಿ ಅಧಿಕಾರಿ ಸಿದ್ದಪ್ಪ ಕಟ್ಟಿಮನಿ, ‘ಆತ್ಮ’ ಯೋಜನೆ ತಾಂತ್ರಿಕ ಮೇಲ್ವೀಚಾರಕ ಸುರೇಶ್‌ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೇಮರಾಜು, ದೇವರಾಜು, ಗೀತಾ ಚಂದ್ರಶೇಖರ್‌, ಎಪಿಎಂಸಿ ಸದಸ್ಯ ಶಿವಲಿಂಗಯ್ಯ, ರೈತಮುಖಂಡರಾದ ಟಿ.ಬಿ.ಹಾಲಪ್ಪ, ಚನ್ನೇಗೌಡ, ಗುರುಸ್ವಾಮಿಗೌಡ, ಎಲ್‌.ಈ.ಶಿವಪ್ಪ, ಗಡಿಮಲ್ಲಿಕಾರ್ಜುನ, ಶಿವಶಂಕರಪ್ಪ, ಗುರುಶಾಂತಪ್ಪ, ಗಂಗಾಧರ, ಶ್ರೀನಿವಾಸ ಇದ್ದರು. ಕಾರ್ಯಕ್ರಮಕ್ಕೆ ಮೊದಲು ಹಳೇಬೀಡಿನ ಪ್ರಮುಖ ಬೀದಿಗಳಲ್ಲಿ ಎತ್ತಿನಗಾಡಿ ಹಾಗೂ ಜನಪದ ಕಲಾತಂಡದೊಂದಿಗೆ ಮೆರವಣಿಗೆ ನಡೆಯಿತು.

ಕೃಷಿ ಅಭಿಯಾನಕ್ಕೆ ಚಾಲನೆ
ಅರಸೀಕೆರೆ: ರೈತರು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಮನಸ್ಸು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾ ಧರ್ಮಶೇಖರ್‌ ಸಲಹೆ ನೀಡಿದರು
ತಾಲ್ಲೂಕಿನ ಅಗ್ಗುಂದ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಕೃಷಿ ಇಲಾಖೆ ಆಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನದ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಎಂಬ ಸಂಚಾರ ಕೃಷಿ ಮಾಹಿತಿ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂತಹ ಕಾರ್ಯಕ್ರಮಗಳಲ್ಲಿ ರೈತರು ಭಾಗವಹಿಸಿ ಅಧಿಕಾರಿಗಳು ನೀಡುವ ಮಾಹಿತಿ ಮತ್ತು ಸವಲತ್ತುಗಳನ್ನು ಪಡೆಯಬೇಕು ಎಂದರು. ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆಂಪಚೌಡಪ್ಪ ಮಾತನಾಡಿ, ಕೃಷಿಗೆ ಸಂಬಂಧಿಸಿದ ಆಧುನಿಕ ಯಂತ್ರೋಪಕರಣಗಳು, ಉತ್ತಮ ಬಿತ್ತನೆಬೀಜಗಳು ಲಭ್ಯ ಇವೆ. ರೈತರ ಮನೆ ಬಾಗಿಲಿಗೆ ಕೃಷಿ ಸಂಬಂಧ ಮಾಹಿತಿ ಒದಗಿಸುವುದು ಕೃಷಿ ಅಭಿಯಾನದ ಉದ್ದೇಶವಾಗಿದೆ ಎಂದರು.

ಗ್ರಾ.ಪಂ ಮಾಜಿ ಸದಸ್ಯ ಎ.ಪಿ. ಚಂದ್ರಯ್ಯ, ಗ್ರೇಡ್‌–2 ತಹಶೀಲ್ದಾರ್‌ ವೈ.ಸಿ.ಪಾಲಾಕ್ಷ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ರಂಗಸ್ವಾಮಿ, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಮಂಜುನಾಥ್‌, ಸಹಾಯಕ ಕೃಷಿ ಅಧಿಕಾರಿ ಪ್ರಭಾವತಿ, ಹರೀಶ್‌ ಇದ್ದರು.

* * 

ಕಡೂರು, ತಿಪಟೂರಿನಲ್ಲಿ 5 ಕೆ.ಜಿ ಹೆಸರುಕಾಳು ಬ್ಯಾಗ್‌ ದರ ₹ 175. ಆದರೆ, ಅರಸೀಕೆರೆ ತಾಲ್ಲೂಕಿನಲ್ಲಿ ₹ 400. ಈ ತಾರತಮ್ಯ ಹೋಗಲಾಡಿಸಬೇಕು
ಎ.ಪಿ. ಚಂದ್ರಯ್ಯ
ಗ್ರಾ.ಪಂ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.