ADVERTISEMENT

ಗುಂಡಿ ಬಿದ್ದ ರಸ್ತೆ: ತಪ್ಪದ ಪ್ರಯಾಣಿಕರ ಸಂಕಟ

ಶಿರಾಡಿ ಘಾಟ್‌ನಲ್ಲಿ 2ನೇ ಹಂತದ ಕಾಂಕ್ರೀಟ್‌ ಕಾಮಗಾರಿ ಆಮೆಗತಿಯಲ್ಲಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:40 IST
Last Updated 5 ಜನವರಿ 2017, 9:40 IST

ಸಕಲೇಶಪುರ: ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಘಾಟ್‌ನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಮುಗಿದಿಲ್ಲ. ಇದರಿಂದಾಗಿ ವಾಹನ ಚಾಲಕರ ಗೋಳು ತಪ್ಪಿಲ್ಲ.

ಕಿ.ಮೀ. 250.62 ಕೆಂಪುಹೊಳೆ ಸೇತುವೆಯಿಂದ ಕಿ.ಮೀ. 263 ಅಡ್ಡಹೊಳೆ ಸೇತುವೆ ವರೆಗೆ ರಸ್ತೆ ಕಾಂಕ್ರೀಟೀಕರಣ ಮಾಡಬೇಕಾಗಿದೆ. ಮೊದಲ ಹಂತದ ಕಾಮಗಾರಿಯಲ್ಲಿ  ಕಿ.ಮೀ. 250.62ರ ವರೆಗೂ ಈಗಾಗಲೇ ಕಾಂಕ್ರೀಟೀಕರಣ ಕಾಮಗಾರಿ ಮುಕ್ತಾಯಗೊಂಡು ಒಂದು ವರ್ಷ ಕಳೆದಿದೆ.  ಕೆಂಪುಹೊಳೆ ಸೇತುವೆಯಿಂದ ಅಡ್ಡಹೊಳೆವರೆಗೆ ರಸ್ತೆ ಸಂಪೂರ್ಣ ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಒಂದೊಂದು ಅಡಿಗೂ ಆಳದ ಗುಂಡಿಗಳು ಬಾಯ್ತೆರೆದುಕೊಂಡಿವೆ. ದೊಡ್ಡ ದೊಡ್ಡ ಲಾರಿಗಳೇ ಸಾಗಲು ಪರದಾಡುವಾಗ ಲಘು ವಾಹನಗಳ ಚಾಲಕರ ಸ್ಥಿತಿ ಅಯೋಮಯವಾಗಿದೆ.

ಎರಡನೇ ಹಂತದ ಕಾಂಕ್ರೀಟ್‌ ರಸ್ತೆ ಕಾಮಗಾರಿ ಆರಂಭದ ದಿನಾಂಕ ಮೇಲಿಂದ ಮೇಲೆ ನಿಗದಿಯಾಗುತ್ತಾ ಬಂದಿದೆಯಾದರೂ ಚಾಲನೆಯೇ ಮಾತ್ರ ದೊರೆಯುತ್ತಿಲ್ಲ.ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌ ಅವರು ಜ. 3ರಿಂದ ಸಂಚಾರ ಸ್ಥಗಿತಗೊಳಿಸಿ ಕಾಂಕ್ರೀಟೀಕರಣ ಆರಂಭಿಸಲು ಖಡಕ್‌ ಆದೇಶ ನೀಡಿದ್ದರೂ ಗುತ್ತಿಗೆದಾರರು ಕ್ಯಾರೇ ಅನ್ನುತ್ತಿಲ್ಲ. 

ರಸ್ತೆ ಸಂಚಾರ ಬಂದ್ ಮಾಡಿ ಕಾಮಗಾರಿ ಆರಂಭಿಸಿದರೆ ಬಹುಬೇಗ ಮುಗಿಯುತ್ತದೆ. ಆದರೆ, ಕಾಂಕ್ರೀಟೀಕರಣ ಆರಂಭಿಸುವ ಪೂರ್ವದಲ್ಲಿ ಮೋರಿಗಳ ಕೆಲಸ ಸಂಪೂರ್ಣವಾಗಬೇಕು. ಈ ಕೆಲಸವೇ ಇನ್ನೂ ಮುಗಿದಿಲ್ಲದಿರುವುದು ಕಾಮಗಾರಿಗೆ ಅಡಚಣೆಗೆ ಮುಖ್ಯ ಕಾರಣವಾಗಿದೆ.

₹ 90.27 ಕೋಟಿ ವೆಚ್ಚದ ಕಾಮಗಾರಿ ಗುತ್ತಿಗೆಯನ್ನು ಜಿವಿಆರ್‌ ಇನ್ಫ್ರಾ ಪ್ರಾಜೆಕ್ಟ್‌ ಪ್ರೈ ಲಿ. ಕಂಪೆನಿಗೆ 2015ರ ನವೆಂಬರ್‌ 6ರಂದು ಗುತ್ತಿಗೆ ನೀಡಲಾಗಿದೆ. 2015ರ ಡಿ.  23ರಂದು ಕಾಮಗಾರಿ ನಿರ್ವಹಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆ  ಗುತ್ತಿಗೆದಾರರಿಗೆ   ರಸ್ತೆಯನ್ನು ಬಿಟ್ಟುಕೊಟ್ಟಿದೆ. ವರ್ಷ ಕಳೆದರೂ  ಶೇ 50ರಷ್ಟು ಮೋರಿಗಳ ಕಾಮಗಾರಿಯನ್ನೇ ಪೂರ್ಣಗೊಳಿಸದೆ ಇರುವುದು ಗುತ್ತಿಗೆದಾರರ ನಿರಾಸಕ್ತಿ ಎದ್ದು ಕಾಣುತ್ತಿದೆ.

ಕಾಮಗಾರಿ ವಿಳಂಬ ಆಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಂಸದ ನಳಿನ್‌ಕುಮಾರ್‌ ಕಟಿಲ್‌, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಗುತ್ತಿಗೆದಾರರಿಗೆ ಖಡಕ್‌ ಎಚ್ಚರಿಕೆ ನೀಡಿ ಮೂರು ತಿಂಗಳು ಕಳೆದಿದೆ. ಆದರೂ ಕಾಮಗಾರಿಗೆ ವೇಗ ಹೆಚ್ಚಿಸಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಗಳೇ ಹೇಳುತ್ತವೆ.

ಕಾಮಗಾರಿ ಪೂರ್ಣಗೊಳಸಲು  ಪ್ರಧಾನ ಕಾರ್ಯದರ್ಶಿಯವರು ನೀಡಿದ ಆದೇಶಕ್ಕೂ ಸಹ ಗುತ್ತಿಗೆದಾರರು ಕವಡೆ ಕಿಮ್ಮತ್ತು ನೀಡಿಲ್ಲ. ಗುತ್ತಿಗೆದಾರರು ಅಧಿಕಾರಿಗಳ ಹಿಡಿತದಲ್ಲಿ ಇಲ್ಲ ಎಂಬುದು ಸಾಬೀತಾಗಿದೆ ಎಂದು ಶಿರಾಡಿ ರಸ್ತೆ ಉಳಿಸಿ ಹೋರಾಟ ಸಮತಿ ಅಧ್ಯಕ್ಷ ಸಂಜಿತ್‌ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಗುತ್ತಿಗೆದಾರರು ಮೋರಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ತಕ್ಷಣವೇ ಮಂಗಳೂರು ಹಾಗೂ ಹಾಸನ ಎರಡೂ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಲಿದೆ.  ಅದು ಯಾವಾಗ ಎಂಬುದು ಪ್ರಯಾಣಿಕರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.