ADVERTISEMENT

ಗುಣಮಟ್ಟದ ದೀಪ ಪೂರೈಸದಿದ್ದರೆ ಟೆಂಡರ್‌ ರದ್ದು

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 6:34 IST
Last Updated 17 ಜೂನ್ 2017, 6:34 IST

ಆಲೂರು: ಅಂಗವಿಕಲ ಫಲಾನುಭವಿಗಳಿಗೆ ವಿತರಿಸಿರುವ ಸೋಲಾರ್ ದೀಪ ಕಳಪೆಯಾಗಿರುವ ಕಾರಣ ಟೆಂಡರ್ ರದ್ದುಪಡಿಸುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರಶೆಟ್ಟಿ ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

₹ 3 ಲಕ್ಷ ವೆಚ್ಚದಲ್ಲಿ 93 ಫಲಾನುಭವಿಗಳಿಗೆ ಸೋಲಾರ್ ದೀಪಗಳನ್ನು ಸರಬರಾಜು ಮಾಡಲು ಟೆಂಡರ್ ನೀಡಲಾಗಿತ್ತು. ಆದರೆ, ಗುತ್ತಿಗೆ ಪಡೆದ ಮಾಲಿಕ ಸೋಲಾರ್ ದೀಪದ ದರ ಹೆಚ್ಚಾಗಿದೆ ಎಂದು ತಿಳಿಸಿ ಕೇವಲ 55 ದೀಪಗಳನ್ನು ಮಾತ್ರ ವಿತರಿಸಿದ್ದಾರೆ. ಈ ಹಿಂದೆ ಅನುಮೋದನೆ ಪಡೆದ ದರದಂತೆಯೇ ಗುಣಮಟ್ಟದ ಸೋಲಾರ್ ದೀಪ ಪೂರೈಸಲು ಸಾಧ್ಯವಾಗದಿದ್ದಲ್ಲಿ ಬೇರೆ ಟೆಂಡರ್ ಕರೆಯಲಾಗುತ್ತದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಡೆಂಗಿ ಪ್ರಕರಣಗಳ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಆದರೂ, ಸಾರ್ವಜನಿಕರು ಎಚ್ಚರಿಕೆ ವಹಿಸಿ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮೂರು ವಾರಗಳಿಂದ ಕೊಳಚೆ ಪ್ರದೇಶವನ್ನು ಗುರುತಿಸಿ ಲಾರ್ವಾ ಸಮೀಕ್ಷೆ ಮಾಡಿ ನಿರ್ಮೂಲನೆಗಾಗಿ ಪಟ್ಟಣ ಪಂಚಾಯಿತಿಗೆ ಪತ್ರ ಬರೆಯಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಎಚ್.ಆರ್.ತಿಮ್ಮಯ್ಯ ಹೇಳಿದರು.

ADVERTISEMENT

ರೈತರು ಜಮೀನಿನಲ್ಲಿ ಬೆಳೆಸಬಹುದಾದ ಸಸಿಗಳನ್ನು ಅರಣ್ಯ ಇಲಾಖೆಯವರು ವಿತರಿಸಬೇಕು ಎಂದು ಸದಸ್ಯ ರಂಗೇಗೌಡ ಒತ್ತಾಯಿಸಿದರು. ಕಳೆದ ಹಲವು ದಿನಗಳಿಂದ ಮಳೆ ಬರುತ್ತಿದ್ದರೂ, ವಾಡಿಕೆಗಿಂತ 20 ಮಿ.ಮೀ. ಕಡಿಮೆಯಿದೆ. ಆದರೂ ರೈತರು ಬಿತ್ತನೆ ಮಾಡಿದ್ದ ಬೀಜಗಳು ಮೊಳಕೆ ಒಡೆದಿವೆ ಎಂದು ಕೃಷಿ ಇಲಾಖೆ ನಿರ್ದೇಶಕಿ ಎ.ಶೈಲಜಾ ತಿಳಿಸಿದರು.

ಜೂನ್ 17ರಂದು ಬೆಳಿಗ್ಗೆ 10ಕ್ಕೆ ವಿಶ್ವ ಯೋಗ ದಿನದ ಅಂಗವಾಗಿ ಪಟ್ಟಣದಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ.ರಾಮಪ್ರಕಾಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.