ADVERTISEMENT

ಜಿಲ್ಲಾಧಿಕಾರಿ ವರ್ಗಾವಣೆಗೆ ಆಗ್ರಹ

ಬಿಜೆಪಿಯಿಂದ ಪ್ರತಿಭಟನೆ: ನೀರಿಗಾಗಿ ಖಾಲಿ ಕೊಡ ಪ್ರದರ್ಶಿಸಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:33 IST
Last Updated 23 ಮಾರ್ಚ್ 2017, 6:33 IST
ಹಾಸನ ಜಿಲ್ಲಾಧಿಕಾರಿ ವಿ.ಚೈತ್ರಾ ಅವರ ವರ್ಗಾವಣೆಗೆ ಆಗ್ರಹಿಸಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೀಶ್‌ ನೇತೃತ್ವದಲ್ಲಿ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು
ಹಾಸನ ಜಿಲ್ಲಾಧಿಕಾರಿ ವಿ.ಚೈತ್ರಾ ಅವರ ವರ್ಗಾವಣೆಗೆ ಆಗ್ರಹಿಸಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೀಶ್‌ ನೇತೃತ್ವದಲ್ಲಿ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು   

ಹಾಸನ: ಕುಡಿಯುವ ನೀರಿನ ಪೂರೈಕೆಯಲ್ಲಿ ಅನಗತ್ಯವಾಗಿ ತೊಂದರೆ ನೀಡುವ ಮೂಲಕ ದ್ವೇಷದ ರಾಜ ಕಾರಣ ಮಾಡುತ್ತಿರುವ ಜಿಲ್ಲಾಧಿಕಾರಿ ವಿ.ಚೈತ್ರಾ ಅವರನ್ನು ವರ್ಗಾವಣೆ ಮಾಡು ವಂತೆ ಆಗ್ರಹಿಸಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೀಶ್‌ ನೇತೃತ್ವದಲ್ಲಿ ನೂರಾರು ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಹೇಮಾವತಿ ಪ್ರತಿಮೆಯಿಂದ ಎನ್‌.ಆರ್‌.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಯಲ್ಲಿ ಬಂದ ಪ್ರತಿಭಟನಾಕಾರರು ಖಾಲಿ ಕೊಡ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಘೋಷಣೆ ಕೂಗಿದರು.

ಸಹರ ಜನಸೇವಾ ಟ್ರಸ್ಟ್ ಎಂಬ ಸಂಸ್ಥೆಯಡಿ ಶುದ್ಧ ನೀರಿನ ಘಟಕ ತೆರೆದು ಲಾಭರಹಿತವಾಗಿ ಜನರಿಗೆ ನೀರು ಪೂರೈಸುತ್ತಿದ್ದೇನೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ನೀರು ಕುಡಿಯಲು ಯೋಗ್ಯವಾಗಿದೆ ಎಂದು ಪ್ರಮಾಣ ಪತ್ರ ನೀಡಿದ್ದಾರೆ.

ತೇಜೂರು ಗ್ರಾಮ ಪಂಚಾಯಿತಿಯಿಂದ ಪರವಾನಗಿ ಸಹ ಪಡೆದಿದ್ದೇನೆ. ಸಂಬಂಧಪಟ್ಟ ದಾಖಲೆ ಗಳಿದ್ದರೂ ರಾಜಕೀಯ ದುರುದ್ದೇಶ ದಿಂದ ಜಿಲ್ಲಾಧಿಕಾರಿ ನನ್ನ ವಿರುದ್ಧ ಸಮರ ಸಾರಿದ್ದಾರೆ.

ಈ ಹಿಂದೆ ಖಾಸಗಿ ಮೈಕ್ರೋ ಫೈನಾನ್ಸ್‌ ಕಂಪೆನಿಗಳ ವಿರುದ್ಧ ಹೋರಾಟ ನಡೆಸಿದೆ ಎಂಬ ಕಾರಣಕ್ಕೆ ದ್ವೇಷ ಸಾಧಿಸುತ್ತಿದ್ದಾರೆ. ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸದ ಜಿಲ್ಲಾಧಿಕಾರಿ ಯನ್ನು ಕೂಡಲೇ ವರ್ಗ ಮಾಡಬೇಕು ಎಂದು ಯೋಗೀಶ್‌ ಆಗ್ರಹಿಸಿದರು.

ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದೆ. ಜನ, ಜಾನುವಾರುಗಳು ಕುಡಿಯುವ ನೀರು ಹಾಗೂ ಮೇವಿಗಾಗಿ ಪರಿತಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ನೀರನ್ನು ಹಣಕ್ಕೆ ಮಾರಾಟ ಮಾಡುವವರು  ಜಿಲ್ಲೆಯಲ್ಲಿ ಬಹಳಷ್ಟು ಇದ್ದಾರೆ.

ಹಣದ ಆಮಿಷಕ್ಕೆ ಕೆಲವರು ಅಶುದ್ಧ ನೀರು  ಪೂರೈಸುತ್ತಿದ್ದಾರೆ. ಹೀಗಿರುವಾಗ ಇಲ್ಲದ ಕಾನೂನು ಉಲ್ಲೇಖಿಸಿ ಶುದ್ಧ ನೀರಿನ ಘಟಕದ ವಿದ್ಯುತ್‌ ಸಂಪರ್ಕ ಕಡಿತ ಗೊಳಿಸುವಂತೆ ಚೆಸ್ಕಾಂಗೆ ಆದೇಶಿಸುವ ಮೂಲಕ ಅನ್ಯಾಯವಸೆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಲ ಮರುಪಾವತಿಗೆ ಫೈನಾನ್ಸ್‌ ಕಂಪೆನಿಗಳು ಬಾಡಿಗೆ ಗೂಂಡಾಗಳನ್ನು ನೇಮಿಸಿ ಶೋಷಣೆ ಮಾಡುತ್ತಿವೆ. ಜನರು ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಹಣಕಾಸು ಸಂಸ್ಥೆಗಳು ಹಾಗೂ ಸಾಲ ಗಾರರ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸುವುದನ್ನು ಬಿಟ್ಟು ಜಿಲ್ಲಾಧಿಕಾರಿ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಶರ್ಮ, ಶಿವಪ್ಪ ಶೆಟ್ಟಿ, ಎಚ್‌.ಕೆ.ದಿನೇಶ್, ಮಂಜೇ ಗೌಡ, ಕಾವ್ಯಾ, ಡಿ.ಕೆ.ಕುಮಾರಸ್ವಾಮಿ, ಸುರೇಶ್‌, ವಿಮಲಾ, ಜ್ಯೋತಿ, ಭಾರತಿ, ಎಚ್.ಡಿ.ಗುರುಮೂರ್ತಿ ಇದ್ದರು.

*
ಮೈಕ್ರೊ ಫೈನಾನ್ಸ್‌ಗಳು ಮಹಿಳಾ ಸಹಕಾರಿ ಸಂಘದ ಸದಸ್ಯರಿಗೆ ಹೆಚ್ಚು ಬಡ್ಡಿಗೆ ಸಾಲ ನೀಡಿ ಮಹಿಳೆಯರನ್ನು ಆರ್ಥಿಕವಾಗಿ ನಿರ್ಗತಿಕರನ್ನಾಗಿ ಮಾಡಿವೆ.
-ಅಗಿಲೆ ಯೋಗೀಶ್‌,
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT