ADVERTISEMENT

ನಿಧಿ ಹುಡುಕಲು ಹೋದವರು ಈಗ ಪೊಲೀಸರ ಅತಿಥಿಗಳು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 8:23 IST
Last Updated 27 ಆಗಸ್ಟ್ 2016, 8:23 IST

ಸಕಲೇಶಪುರ: ನಿಧಿ ಇದೆ ಎಂದು ಮನೆಯ ಕೋಣೆಯೊಳಗೆ ಸುಮಾರು 15 ಅಡಿ ಆಳ ಗುಂಡಿ ತೆಗೆದಿರುವ ಘಟನೆ ತಾಲ್ಲೂಕಿನ ಹಾನುಬಾಳು ಗ್ರಾಮದಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ಗ್ರಾಮದ ಆಸಿಫ್‌ ಮನೆಯಲ್ಲಿ ಈ ಪ್ರಕರಣ ಪತ್ತೆ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ  ಪುತ್ತೂರು ನಿವಾಸಿಗಳಾದ ಅಶ್ರಫ್‌, ಇಬ್ರಾಹಿಂ, ಅಬ್ದುಲ್‌ ಜಾಫರ್‌, ಅಬ್ದುಲ್ಲಾ, ಮನೆಯ ಮಾಲಿಕ ಆಸಿಫ್‌ ಹಾಗೂ ಇವರ ಪುತ್ರ ಅಪ್ಸರ್‌ ಅವರನ್ನು ಗ್ರಾಮಾಂತರ ಪೊಲೀಸರು ಬಂಧಿಸಿ ತಾಲ್ಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಿದರು.

ಘಟನೆ ವಿವರ:  ಮನೆಯ ಒಳಗೆ ನಿಧಿ ಇದೆ ಎಂದು ಕೇರಳದ ಗುರುಗಳು ಹೇಳಿದರು ಎನ್ನಲಾಗಿದೆ. ನಿಧಿ ಹುಡುಕಲು ಅಕ್ಕ ಪಕ್ಕದ ಮನೆಯವರಿಗೂ ಗೊತ್ತಾಗದಂತೆ ಡ್ರಿಲ್ಲಿಂಗ್‌ ಮಿಷನ್‌ನಿಂದ ಗುಂಡಿ ತೆಗೆಯಲಾಗಿದೆ. ತೆರೆದ ಬಾವಿಯಂತೆ ಗುಂಡಿ ತೋಡಲಾಗಿದ್ದು, ಅಕ್ಕಪಕ್ಕದ ನಿವಾಸಿಗಳಿಗೆ ಅನುಮಾನ ಬಂದು ನೋಡಿದಾಗ ನಿಧಿ ಹುಡುಕುವುದಕ್ಕೆ ಗುಂಡಿ ತೋಡುತ್ತಿದ್ದಾರೆ ಎಂಬ ಮಾಹಿತಿ ಗ್ರಾಮಸ್ಥರಿಗೆ ತಿಳಿದು ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಠಾಣೆ ಪಿಎಸ್‌ಐ ಭೇಟಿ ನೀಡಿ ಪರಿಶೀಲಿಸಿದಾಗ ಸುಮಾರು 15 ಅಡಿ ಆಳದ ಗುಂಡಿ ತೋಡಲಾಗಿತ್ತು. ಗುಂಡಿ ತೋಡುತ್ತಿದ್ದವರು ಸಹ ಸ್ಥಳದಲ್ಲಿಯೇ ಇದ್ದಿದ್ದರಿಂದ ಎಲ್ಲರನ್ನೂ ಬಂಧಿಸಿದರು.

‘ಮನೆಯೊಳಗೆ ಕಲ್ಲು ಇರುವುದರಿಂದ ಏಳಿಗೆ ಆಗುವುದಿಲ್ಲ ಎಂದು ಗುರುಗಳು ಹೇಳಿದ್ದರು. ಆ ಕಾರಣದಿಂದ ಗುಂಡಿ ತೆಗೆಯಲಾಗುತ್ತಿದೆ’ ಎಂದು ಮನೆಯ ಮಾಲಿಕ ಆಸಿಫ್‌ ಹೇಳಿಕೆ ನೀಡಿದ್ದಾಗಿ ಗ್ರಾಮಾಂತರ ಠಾಣೆ ಪಿಎಸ್‌ಐ ಕೆ.ಜಗದೀಶ್‌ ಸುದ್ದಿಗಾರರಿಗೆ ಹೇಳಿದರು.

ಕಾನೂನು ಬಾಹಿರ ಚಟುವಟಿಕೆ ಶಂಕೆ: ಮನೆಯೊಳಗೆ ನಿಧಿ ಇದೆ ಎಂದು ಹೇಳುತ್ತಿರುವುದು ಸುಳ್ಳು, ಇದರ ಹಿಂದೆ ಕಾನೂನು ಬಾಹಿರ ಚಟುವಟಿಕೆಯ ಶಂಕೆ ವ್ಯಕ್ತವಾಗುತ್ತಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.