ADVERTISEMENT

ಭತ್ತದ ಬೆಳೆಗೆ ಸೈನಿಕ ಹುಳುಗಳ ಕಾಟ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 7:25 IST
Last Updated 27 ನವೆಂಬರ್ 2017, 7:25 IST

ಸಕಲೇಶಪುರ: ತಾಲ್ಲೂಕಿನಲ್ಲಿ ಭತ್ತದ ಬೆಳೆಗೆ ಸೈನಿಕ ಹುಳುಗಳ ಬಾಧೆ ಇದ್ದು, ಭತ್ತದ ಬೆಳೆ ನಾಶ ಮಾಡುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಹಾನುಬಾಳು ಹೋಬಳಿ ವ್ಯಾಪ್ತಿಯ ದಬ್ಬೇಗದ್ದೆಯಲ್ಲಿ ಸುಮಾರು 20 ಎಕರೆ ಪ್ರದೇಶದ ಭತ್ತದ ಗದ್ದೆಯಲ್ಲಿ ಸೈನಿಕ ಹುಳುಗಳ ದಾಳಿಗೆ ಬೆಳೆ ಹಾನಿಯಾಗಿದೆ. ಹೆತ್ತೂರು, ಯಸಳೂರು ಹೋಬಳಿ ವ್ಯಾಪ್ತಿಯಲ್ಲಿ ಸಹ ಸೈನಿಕ ಹುಳುಗಳ ಬಾಧೆಯಿಂದ ರೈತರ ನೆಮ್ಮದಿಗೆ ಭಂಗ ತಂದಿದೆ. 

ಹುಳು ಬಾಧೆ: ಭತ್ತದ ಬೆಳೆ ಮಾಗುವ ಹಂತದಿಂದ ಕಟಾವು ಹಂತದಲ್ಲಿ ಸೈನಿಕ ಹುಳುಗಳು ಭತ್ತದ ತೆನೆಗಳನ್ನು ಕತ್ತರಿಸುತ್ತವೆ. ಹಗಲು ತೆಂಡೆಗಳ ಬುಡ ಅಥವಾ ಮಣ್ಣಿನಲ್ಲಿ ಅಡಗಿದ್ದು, ರಾತ್ರಿವೇಳೆ ತೆನೆ ಮತ್ತು ಗರಿಗಳನ್ನು ತಿಂದು ನಾಶಪಡಿಸುತ್ತವೆ.

ಇವುಗಳ ನಿಯಂತ್ರಣ ರೈತರಿಗೆ ಕಷ್ಟವಾಗಿದೆ. ಶೇ 40ರಷ್ಟು ಬೆಳೆಯನ್ನು ಹುಳುಗಳು ನಾಶ ಮಾಡಿವೆ ಎಂದು ದಬ್ಬೇಗದ್ದೆ ಗ್ರಾಮದ ಪ್ರಗತಿಪರ ರೈತ ಸುಬ್ರಾಯಗೌಡ ಹೇಳಿದರು. ರೋಗ ನಿಯಂತ್ರಣಕ್ಕೆ ಕ್ರಮಗಳು: ಗದ್ದೆಯಲ್ಲಿ ಮೊದಲು ನೀರು ಖಾಲಿಮಾಡಿ ಸಿಂಪಡಣೆಗೆ ಅವಕಾಶವಿದ್ದಲ್ಲಿ ಆಮ್ಲ 1 ಎಂ.ಎಲ್. ಒಂದು ಲೀ ನೀರಿಗೇ ಅಥವಾ ಲಾರ್ವಿನ್ 1 ಎಂ.ಎಲ್. ಒಂದು ಲೀಟರ್ ನೀರಿಗೆ ಬೆರೆಸಿ ಬುಡಕ್ಕೆ ಸಿಂಪರಣೆ ಮಾಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ಮಾಡಿದ್ದಾರೆ.

ADVERTISEMENT

ಒಂದು ಎಕರೆಗೆ ಔಷಧ ತಯಾರಿಸಲು 25ಕೆ.ಜಿ ಭತ್ತದ ತೌಡು, 5 ಕೆ.ಜಿ ಬೆಲ್ಲ ಮತ್ತು 10 ಲೀ ನೀರನ್ನು ಡ್ರಮ್ಮಿನಲ್ಲಿ ಇಟ್ಟು, ಎರಡೂ ದಿನ ಬಿಡಬೇಕು. ಎರಚುವ ಹತ್ತು ನಿಮಿಷ ಮೊದಲು ಆಮ್ಲ 250 ಎಂ.ಎಲ್ ಅಥವಾ ಲಾರ್ವಿನ್ (ಥಯೊಡಿಕಾರ್ಬೂ) 250ಗ್ರಾಂ ಅನ್ನು ಮಿಶ್ರಣ ಮಾಡಬೇಕು ಎಂದು ಹೇಳಿದ್ದಾರೆ.

ಸಂಜೆ 5ರ ನಂತರ ಕೈ ಕವಚ ಧರಿಸಿ ಬೆಳೆಗಳಿಗೆ ಎರಚಬೇಕು. ದನಕರುಗಳಿಗೆ ಇಲ್ಲಿ ಮೇಯಲು ಬಿಡಬಾರದು. ಮೇಲಿನ ಹತೋಟಿ ಕ್ರಮಗಳನ್ನು ರೈತರು ತುರ್ತಾಗಿ ಮತ್ತು ಸಾಮೂಹಿಕವಾಗಿ ಕೈಕೊಂಡರೆ ಸೈನಿಕ ಹುಳುವಿನ ನಿರ್ವಹಣೆ ಸಾಧ್ಯ ಎಂದು ಕೃಷಿ ಸಹಾಯಕ ಎಚ್‌. ಶ್ರೀನಿವಾಸ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.