ADVERTISEMENT

ಮಾವು; ಗುಣಮಟ್ಟ ಪರಿಶೀಲನೆ

ಹಣ್ಣು ಮಾರಾಟ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 27 ಮೇ 2018, 13:08 IST
Last Updated 27 ಮೇ 2018, 13:08 IST
ಹಾಸನಾಂಬ ಕಲಾಕ್ಷೇತ್ರದ ಎದುರು ಮಾರಾಟ ಮಾಡುತ್ತಿದ್ದ ಮಾವಿನಹಣ್ಣಿನ ಗುಣಮಟ್ಟವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಪರಿಶೀಲಿಸಿದರು
ಹಾಸನಾಂಬ ಕಲಾಕ್ಷೇತ್ರದ ಎದುರು ಮಾರಾಟ ಮಾಡುತ್ತಿದ್ದ ಮಾವಿನಹಣ್ಣಿನ ಗುಣಮಟ್ಟವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಪರಿಶೀಲಿಸಿದರು   

ಹಾಸನ: ಜಿಲ್ಲೆಯಲ್ಲಿ ನಿಫಾ ವೈರಾಣು ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ನೇತೃತ್ವದ ತಂಡ ಹಾಸನಾಂಬ ಕಲಾಕ್ಷೇತ್ರದ ಎದುರು ಮಾರಟ ಮಾಡುತ್ತಿರುವ ಮಾವಿನಹಣ್ಣುಗಳ ಗುಣಮಟ್ಟ ಪರಿಶೀಲನೆ ನಡೆಸಿತು.

ರಸ್ತೆ ಬದಿಯಲ್ಲಿ ಮಾರುತ್ತಿದ್ದ ಮಾವಿನ ಹಣ್ಣನ್ನು ಕ್ಯಾಲ್ಸಿಯಂ ಕಾರ್ಬೈಡ್‌ ಮೂಲಕ ಹಣ್ಣು ಮಾಡಲಾಗುತ್ತದೆ ಎಂಬ ದೂರು ಬಂದ ಮೇರೆಗೆ ಹಣ್ಣಿನ ಮಂಡಿಗಳಿಗೂ ತೆರಳಿ ಪರಿಶೀಲನೆ ಮಾಡಲಾಯಿತು.

ವ್ಯಾಪಾರ ಮಾಡುವವರು ಯಾರಿಂದ ಸರಕು ಪಡೆಯುತ್ತಾರೆ. ಮಾವಿನ ಹಣ್ಣುಗಳನ್ನು ಯಾವ ರೀತಿ ಹಣ್ಣು ಮಾಡಲಾಗುತ್ತದೆ ಹಾಗೂ ಯಾವುದೇ ರಾಸಾಯನಿಕ ಬಳಸಲಾಗುತ್ತದೆಯೇ ಎಂಬುದನ್ನು ಪರಿಶೀಲಿಸಿದರು.

ADVERTISEMENT

ರಸ್ತೆ ಬದಿಯಲ್ಲಿ ಮಾರಾಟ ಮಾಡುವ ವರ್ತಕರಿಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಸಲಹೆ ನೀಡಿದರು.

ನಗರ ಸಭೆಯಿಂದ ಇಂತಿಷ್ಟು ದಿನದವರೆಗೆ ವ್ಯಾಪಾರ ಮಾಡಲಾಗುತ್ತದೆ ಎಂದು ವ್ಯಾಪಾರಿಗಳು ಪರವಾನಗಿ ಪಡೆಯಬೇಕು. ಪರವಾನಗಿ ಪಡೆಯಲು ಎರಡು ದಿನ ಕಾಲವಕಾಶ ನೀಡುವುದು. ಇಲ್ಲವಾದಲ್ಲಿ ಹಣ್ಣನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

‘ಜಿಲ್ಲೆಯಲ್ಲಿ ನಿಫಾ ವೈರಸ್ ಹರಡದಂತೆ ಎಚ್ಚರ ವಹಿಸಬೇಕು. ಯಾವುದೇ ಪ್ರಾಣಿ, ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ಮಾರಾಟ ಮಾಡದಂತೆ ಹಾಗೂ ಪ್ರತಿ ಹಣ್ಣನ್ನು ಪರಿಶೀಲಿಸಿ ಮಾರಾಟ ಮಾಡಬೇಕು’ ಎಂದು ಸೂಚಿಸಿದರು.

ಕೊಳೆತ ಹಣ್ಣುಗಳನ್ನು ಬೀದಿಗೆ ಬಿಸಾಡದೆ ಕಸದ ವಾಹನಗಳ ಮೂಲಕವೇ ವಿಲೇವಾರಿ ಮಾಡಬೇಕು ಹಾಗೂ ಯಾವುದೇ ಸಾಂಕ್ರಾಮಿಕ ರೋಗಗಳಿಗೆ ಆಸ್ಪದ ನೀಡದೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಆಹಾರ ಗುಣಮಟ್ಟ ಸುರಕ್ಷಿತಾಧಿ ಕಾರಿ ಡಾ. ಹಿರಣ್ಣಯ್ಯ, ಆಹಾರ ಸುರಕ್ಷತಾ ಅಧಿಕಾರಿ ಹಡಬಸವೇಗೌಡ ಹಾಗೂ ಸಿಬ್ಬಂದಿ ಇದ್ದರು.

ಜಿಲ್ಲೆಯಲ್ಲಿ 45 ಡೆಂಗಿ ಪ್ರಕರಣ
ಜಿಲ್ಲೆಯಲ್ಲಿ ಜನವರಿ ಯಿಂದ ಈ ವರೆಗೆ ಒಟ್ಟು 45 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್‌ ತಿಳಿಸಿದರು.
ಕಳೆದ ವರ್ಷ ಜಿಲ್ಲೆಯಲ್ಲಿ 460 ಪ್ರಕರಣಗಳು ಬೆಳಕಿಗೆ ಬಂದಿತ್ತು. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಜಂಟಿಯಾಗಿ ಡೆಂಗಿ ಸೊಳ್ಳೆ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದ ಹಿನ್ನೆಲೆಯಲ್ಲಿ ಪ್ರಕರಣಗಳು ಕಡಿಮೆಯಾಗಿದೆ. 3 ಚಿಕೂನ್‌ ಗುನ್ಯಾ ಪ್ರಕರಣ ಪತ್ತೆಯಾಗಿದೆ ಎಂದರು. ಮುಂಗಾರು ಆರಂಭವಾಗಿದ್ದು, ಮನೆ ಸುತ್ತಮುತ್ತ ಹಾಗೂ ಇತರೆ ಕಡೆಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಜ್ವರ ಬಂದಲ್ಲಿ ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೋಳ್ಳಬೇಕು ಎಂದು ಸಲಹೆ ನಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.