ADVERTISEMENT

ಮೀಸಲಾತಿ ಪಡೆದವರಿಂದಲೇ ಶೋಷಣೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:48 IST
Last Updated 15 ಏಪ್ರಿಲ್ 2017, 5:48 IST

ಬೇಲೂರು: ರಾಜಕೀಯ, ಶೈಕ್ಷಣಿಕ, ಔದ್ಯೋಗಿಕವಾಗಿ ಅಂಬೇಡ್ಕರ್ ನೀಡಿದ ಮೀಸಲಾತಿ ಅನುಭವಿಸಿದವರು ಜನಾಂಗದ ಅಭಿವೃದ್ಧಿ ಕಡೆ ಗಮನ ನೀಡದೆ ಸ್ವಾರ್ಥಿಗಳಾಗಿ ತಳ ಸಮುದಾಯಗಳನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಕೊಳ್ಳೇಗಾಲ ಚೇತವನ ಬುದ್ಧ ವಿಹಾರದ ಸುಗತ ಪಾಲ ಬಂತೇಜಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೇಣೀಕೃತ ಜಾತಿ ವ್ಯವಸ್ಥೆಯ ವಿರುದ್ಧದ ಸಾಮಾಜಿಕ ಕ್ರಾಂತಿಯನ್ನು ಪ್ರತಿ ಹಂತದಲ್ಲಿ ತೀವ್ರವಾಗಿ ವಿರೋಧಿಸಿದ ಪುರೋಹಿತಶಾಹಿಗಳು ಅಸಮಾನತೆ, ಜಾತಿ ಪದ್ಧತಿಯನ್ನು ಇಂದಿಗೂ ಬೆಂಬಲಿಸುತ್ತಿದ್ದಾರೆ. ಹಿಂದೂ ಧರ್ಮದ ಸುಧಾರಣಾವಾದಿಗಳು ತಳ ಸಮುದಾಯಗಳ ಸಾಮಾಜಿಕ ಶೈಕ್ಷಣಿಕ ಸಬಲೀಕರಣಕ್ಕಾಗಿ ಮೀಸಲಾತಿ ಎನ್ನುವ ನ್ಯಾಯದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ತಿರುಚಿ ಅಂಬೇಡ್ಕರ್ ತತ್ವ ಸಿದ್ಧಾಂತವನ್ನು ಹಾದಿ ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದರು.

ADVERTISEMENT

ಮಂಗಳೂರಿನ ಅಂಬೇಡ್ಕರ್‌ವಾದಿ ಆತ್ರಾಡಿ ಅಮೃತಾ ಶೆಟ್ಟಿ, ಸರ್ವರಿಗೂ ಸಮಾನ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮೀಸಲಾತಿ ನೀಡಿದ ಅಂಬೇಡ್ಕರ್ ಭಾರತದ ಜನರಿಗೆ ಇನ್ನೂ ಪರಿಚಯವಾಗಿಲ್ಲ. ಆದರೆ ಕೊಲಂಬಿಯ ವಿಶ್ವವಿದ್ಯಾಲಯ ಅಂಬೇಡ್ಕರ್ ಇಲ್ಲಿ ವ್ಯಾಸಂಗ ಮಾಡಿದ ವ್ಯಕ್ತಿ ಎಂದು ಅಂಬೇಡ್ಕರ್ ಜನ್ಮ ದಿನವನ್ನು ವಿಶ್ವಜ್ಞಾನ ದಿನವಾಗಿ ಘೋಷಣೆ ಮಾಡಿದೆ. ಅಂಬೇಡ್ಕರ್ ಅವರ ಹೆಸರು ರಾಜಕೀಯ ನಾಯಕರಿಗೆ ಮತ ಗಳಿಸಲು ಬಳಸಿಕೊಳ್ಳುತ್ತಿದೆ ಎಂದರು.  

ಶಾಸಕ ವೈ.ಎನ್.ರುದ್ರೇಶಗೌಡ ಮಾತನಾಡಿದರು.ತಾ.ಪಂ.ಅಧ್ಯಕ್ಷ ಬಾಣಸವಳ್ಳಿ ಆಶ್ವಥ್, ಪುರಸಭೆ ಅಧ್ಯಕ್ಷೆ ಮುದ್ದಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲತಾಮಂಜೇಶ್ವರಿ, ಸೈಯದ್‌ ತೌಫೀಕ್‌, ಮಂಜಣ್ಣ, ರತ್ನಮ್ಮಐಸಾಮಿಗೌಡ, ಲತಾದಿಲೀಪ್, ತಾ.ಪಂ.ಉಪಾಧ್ಯಕ್ಷೆ ತೀರ್ಥಮ್ಮ, ಪುರಸಭೆ ಉಪಾಧ್ಯಕ್ಷ ಅರುಣ್‌ಕುಮಾರ್‌, ವೈ.ಎನ್.ಕೃಷ್ಣೇಗೌಡ, ಎಚ್.ಎಂ.ವಿಶ್ವನಾಥ್, ರೇಣುಕುಮಾರ್, ಕೊರಟಿಕೆರೆಪ್ರಕಾಶ್, ಕೆ.ಎಸ್.ಲಿಂಗೇಶ್, ಇ.ಎಚ್.ಲಕ್ಷ್ಮಣ್, ಪರ್ವತಯ್ಯ, ಮಂಜುನಾಥ್, ತೀರ್ಥಕುಮಾರ್, ಬಾಬು, ಇಕ್ಬಾಲ್ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.