ADVERTISEMENT

‘ರೈತರಿಗೆ ನೆರವಾಗದ ಕೇಂದ್ರ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 6:35 IST
Last Updated 19 ಸೆಪ್ಟೆಂಬರ್ 2017, 6:35 IST

ಜಾವಗಲ್‌: ಕೇಂದ್ರ ಸರ್ಕಾರವು ಕಾರ್ಪೊರೇಟ್‌ ಸಂಸ್ಥೆ ಹಾಗೂ ಉದ್ಯಮಿಗಳಿಗೆ ಅನುಕೂಲ ಮಾಡುತ್ತಿದೆ. ರೈತರಿಗೆ ಕಷ್ಟಗಳಿಗೆ ಕಿಂಚಿತ್ತೂ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್‌ ಕಿಸಾನ್‌ ಮಜದೂರ್‌ ಸಮಿತಿ ಜಿಲ್ಲಾಧ್ಯಕ್ಷ ಪ್ರದೀಪ್‌ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಂಗ್ರೆಸ್‌ ಕಿಸಾನ್‌ ಮಜದೂರ್‌ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದ ಫಸಲ್‌ ಭಿಮಾ ಯೋಜನೆಯಿಂದ ರೈತರಿಗೆ ಮೋಸವಾಗಿದೆ. ವಿಮೆಯ ಪರಿಹಾರದ ಹಣ ಇನ್ನೂ ರೈತರಿಗೆ ತಲುಪಿಲ್ಲ. ಪ್ರಧಾನಿ ಅವರು ವಿಮೆ ಕಂಪೆನಿಯನ್ನು ಬಡ ರೈತರ ಮೂಲಕ ಉದ್ಧಾರ ಮಾಡುತ್ತಿದ್ದಾರೆ’ ಎಂದು ದೂರಿದರು.

‘ರಾಜ್ಯದ ರೈತರು ತೀವ್ರ ಬರಗಾಲದಿಂದ ಬಳಲುತ್ತಿದ್ದಾರೆ. ಸಾಲ ತಿರಿಸಲಾಗದೆ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಕಣ್ಣುಬಿಟ್ಟುಕೊಂಡು ನಿದ್ದೆ ಮಾಡುತ್ತಿದೆ. ದೇಶದ ಅನ್ನದಾತನ ಹಿತಕಾಯುವ ಬದಲು ಉದ್ಯಮಿಗಳ ಹಿತ ಕಾಯುತ್ತಿದೆ. ದೇಶಕ್ಕೆ ಮುಖ್ಯವಾಗಿಬೇಕಾಗಿರುವುದು ರೈತನೆ ಹೊರತು ಉದ್ಯಮಿಗಳಲ್ಲ’ ಎಂದರು.

ADVERTISEMENT

ಸಮಿತಿ ಬ್ಲಾಕ್‌ ಅಧ್ಯಕ್ಷ ಜೆ.ಎಂ.ಚಂದ್ರಪ್ಪ ಮಾತನಾಡಿದರು. ನಂತರ ಬೈಕ್‌ ಮೂಲಕ ಜಾಥಾ ನಡೆಸಿ, ಕಿಸಾನ್‌ ಸದಸ್ಯರನ್ನು ಭೇಟಿ ಮಾಡಿ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ತಿಳಿಸಿದರು. ನಂತರ ಕಾಂಗ್ರೆಸ್‌ ಕಿಸಾನ್‌ ಮಜದೂರ್‌ ಸಮಿತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬ್ಲಾಕ್‌ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಧರ್ಮಪಾಲ್, ಗೆಂಡೆಹಳ್ಳಿ ಶ್ರೀನಿವಾಸ್‌, ಕಾರ್ಯದರ್ಶಿಗಳಾದ ಚಿಕ್ಕಬೇಡಗೆರೆ ಕುಮಾರ್‌, ಮಹೇಶ್‌, ಜೆ.ಆರ್‌.ನಾಗರಾಜು, ಹೋಬಳಿ ಯೂಥ್‌ ಕಾಂಗ್ರೆಸ್‌ ಅಧ್ಯಕ್ಷ ಜೆ.ಎಸ್‌.ಚೇತನ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.