ADVERTISEMENT

ಶುದ್ಧಗಂಗಾ ಘಟಕದ ತ್ಯಾಜ್ಯ ನೀರಿಗೂ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 7:12 IST
Last Updated 2 ಸೆಪ್ಟೆಂಬರ್ 2017, 7:12 IST

ಹಳೇಬೀಡು: ಮಳೆ ಬೀಳದೆ ಇರುವುದರಿಂದ ಹಳೇಬೀಡು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೃಷಿ ಪತ್ತಿನ ಸಹಕಾರ ಸಂಘದ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮ ಪಂಚಾಯತಿ ಆಶ್ರಯದಲ್ಲಿ ಆರಂಭಿಸಿರುವ ಶುದ್ಧಗಂಗಾ ಘಟಕದಿಂದ ಬರುವ ತ್ಯಾಜ್ಯದ ನೀರನ್ನು ಸಹ ಸಾಕಷ್ಟು ಜನರು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಇಷ್ಟರವರೆಗೆ ಬಿದ್ದ ಮಳೆಯಿಂದ ಅಲ್ಪ ಪ್ರಮಾಣದಲ್ಲಿ ಅಂತರ್ಜಲ ಏರಿಕೆಯಾಗಿದ್ದರೂ ಸಮಾಧಾನಕರವಾಗಿಲ್ಲ. ಹೀಗಾಗಿ ಕೆಲ ಜನರು ಮನೆ, ಕೊಟ್ಟಿಗೆ ಶುಚಿಗೊಳಿಸಲು, ಪಾತ್ರೆ ತೊಳೆಯಲು ಫ್ಲೊರೈಡ್‌ಯುಕ್ತ ನೀರನ್ನು ಬಳಕೆ ಮಾಡುತ್ತಿದ್ದಾರೆ.

ಶುದ್ಧೀಕರಣದಿಂದ ಹೊರಬರುವ ಶೇ50ರಷ್ಟು ತ್ಯಾಜ್ಯದ ನೀರು ಬಳಕೆಗೆ ಯೋಗ್ಯವಾಗಿಲ್ಲ. ಈ ನೀರನ್ನು ಬಳಕೆ ಮಾಡಿದರೆ ಚರ್ಮಕ್ಕೆ ತೊಂದರೆಯಾಗುತ್ತದೆ ಎಂಬ ಮಾತು ಹಲವರಿಂದ ಕೇಳಿ ಬರುತ್ತಿದೆ. ನೀರಿನ ಸಮಸ್ಯೆ ಹೆಚ್ಚಿರುವುದರಿಂದ ಜನರು ಯಾವುದಕ್ಕೂ ಕಿವಿಗೊಡದೇ ಅದನ್ನೇ ಬಳಸುತ್ತಿದ್ದಾರೆ. ಸ್ನಾನಕ್ಕೂ ಸಹ ಬಳಸುತ್ತೇವೆ ಎಂದು ಕೆಲವರು ಹೇಳಿದರು.

ADVERTISEMENT

ಪಂಚಾಯತಿಯ ಕಿರು ನೀರು ಸರಬರಾಜು ಬಾವಿಗಳ ಬಳಿ ಸಾಲಿನಲ್ಲಿ ನಿಂತರೂ ದಿನಕ್ಕೆ 10 ಬಿಂದಿಗೆ ನೀರು ದೊರಕುವುದು ಕಷ್ಟ. ಹೀಗಾಗಿ ವಿಧಿ ಇಲ್ಲದೆ ಫ್ಲೋರೈಡ್‌ಯುಕ್ತ ನೀರನ್ನೇ ಬಳಸುವ ಸ್ಥಿತಿ ಬಂದಿದೆ ಎಂದು ತರಗಿನ ಪೇಟೆ ನಿವಾಸಿ ರಾಜಗೆರೆ ಚಂದ್ರು ತಿಳಿಸಿದರು.

22 ಕೊಳವೆ ಬಾವಿಗಳಿಂದ ಹಳೇಬೀಡು ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ವಾರದ ಹಿಂದೆ ಮಳೆ ಬಿದ್ದಿದ್ದರಿಂದ ಅಂತರ್ಜಲದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ. ಸರಿಯಾಗಿ ಮಳೆ ಬಂದರಷ್ಟೇ ಕುಡಿಯುವ ನೀರಿನ ಬವಣೆ ತಪ್ಪಿಸಲು ಸಾಧ್ಯ. ಬೇಲೂರು ಯಗಚಿ ಅಣೆಕಟ್ಟೆಯಲ್ಲಿ ಸ್ವಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ.

ಸದ್ಯಕ್ಕೆ ವಾರಕ್ಕೊಮ್ಮೆ ಅಣೆಕಟ್ಟೆಯ ಹಿನ್ನೀರಿನಿಂದ ಹಳೇಬೀಡಿಗೆ ನೀರು ಪೂರೈಕೆ ಮಾಡಲು ಅವಕಾಶವಿದೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆ.ಹರೀಶ್‌ ವಿವರಿಸಿದರು.

ಪಟ್ಟಣದಲ್ಲಿ ಅಂದಾಜು 2000 ಮನೆಗಳಿವೆ ಈಗ 800 ಕುಟುಂಬಗಳಿಗೆ ಮಾತ್ರ ಶುದ್ಧೀಕರಿಸಿದ ನೀರು ದೊರಕುತ್ತದೆ. ಪಟ್ಟಣದಲ್ಲಿ ಹೆಚ್ಚುವರಿ ಎರಡು ಶುದ್ಧಗಂಗಾ ಘಟಕ ಆಗಬೇಕು. ಜಿಲ್ಲಾ ಪಂಚಾಯತಿ ತಕ್ಷಣ ಗಮನಹರಿಸಿ ಮುದಿನ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಗ್ರಾಮ ಪಂಚಾಯತಿ ಸದಸ್ಯ ನಿಂಗಪ್ಪ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.