ADVERTISEMENT

ಶೇ 80ರಷ್ಟು ಕಾಮಗಾರಿ ಪೂರ್ಣ

ಶ್ರವಣಬೊಳಗೊಳ: ಅಟ್ಟಣಿಗೆ ಕಾಮಗಾರಿ ವೀಕ್ಷಿಸಿದ ಶಾಸಕ ಸಿ.ಎನ್‌.ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 7:09 IST
Last Updated 21 ಡಿಸೆಂಬರ್ 2017, 7:09 IST
ವಿಂಧ್ಯಗಿರಿಯ ಬಾಹುಬಲಿ ಬೆಟ್ಟದಲ್ಲಿ ಅಟ್ಟಣಿಗೆ ಕಾಮಗಾರಿಯನ್ನು ಬುಧವಾರ ಶಾಸಕ ಸಿ.ಎನ್‌.ಬಾಲಕೃಷ್ಣ ವೀಕ್ಷಿಸಿದರು.
ವಿಂಧ್ಯಗಿರಿಯ ಬಾಹುಬಲಿ ಬೆಟ್ಟದಲ್ಲಿ ಅಟ್ಟಣಿಗೆ ಕಾಮಗಾರಿಯನ್ನು ಬುಧವಾರ ಶಾಸಕ ಸಿ.ಎನ್‌.ಬಾಲಕೃಷ್ಣ ವೀಕ್ಷಿಸಿದರು.   

ಶ್ರವಣಬೆಳಗೊಳ: ಜರ್ಮನ್ ತಂತ್ರಜ್ಞಾನ ಬಳಸಿ ನಿರ್ಮಿಸುತ್ತಿರುವ ಅಟ್ಟಣಿಗೆ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಬುಧವಾರ ಹೇಳಿದರು. ಪಟ್ಟಣದ ವಿಂಧ್ಯಗಿರಿಯ ಬಾಹುಬಲಿ ಬೆಟ್ಟದ ಅಟ್ಟಣಿಗೆ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು.

ಮಸ್ತಕಾಭಿಷೇಕಕ್ಕೆ ಸುಮಾರು 35 ಲಕ್ಷ ಯಾತ್ರಾರ್ಥಿಗಳು ಬರುತ್ತಾರೆ. ಬೆಟ್ಟ ಹತ್ತುವಾಗ ಮತ್ತು ಇಳಿಯುವಾಗ ರೈಲಿಂಗ್ಸ್‌ನ ಎರಡೂ ಬದಿಗಳಲ್ಲಿ ಸೂಚನಾ ಫಲಕಗಳನ್ನು ಹಾಕಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

ಉಪ ನಗರದ ವಸತಿ ಕೇಂದ್ರದಲ್ಲಿ 17 ಸಾವಿರ ಜನರಿಗೆ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅತಿ ಗಣ್ಯರ ವಸತಿಗೆ ಉಪ ನಗರಗಳಲ್ಲಿ 500 ಮಂದಿಗೆ ವಿಶೇಷ ಕುಟೀರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಶ್ರವಣಬೆಳಗೊಳ ವಿಧಾನಸಭಾ ವ್ಯಾಪ್ತಿಗೆ ₹ 40 ಕೋಟಿ ಮಂಜೂರಾಗಿದ್ದು, ಪಟ್ಟಣ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಅಂದರೆ ನಾಗಮಂಗಲದಿಂದ ಶ್ರವಣಬೆಳಗೊಳಕ್ಕೆ, ಹಿರಿಸಾವೆಯಿಂದ ಸುಂಡಹಳ್ಳಿವರೆಗೆ, ಮಟ್ಟನವಿಲೆಯಿಂದ ಶ್ರವಣಬೆಳಗೊಳಕ್ಕೆ, ಹೆದ್ದಾರಿ ಸಂಪರ್ಕಿಸುವ ರಸ್ತೆವರೆಗೆ, ಕಾಂತರಾಜಪುರ ಮತ್ತು ಕಬ್ಬಾಳು ಗ್ರಾಮದಿಂದ ಕಿಕ್ಕೇರಿವರೆಗಿನ ಎಲ್ಲಾ ರಸ್ತೆಗಳು 15 ದಿನದಲ್ಲಿ ಡಾಂಬರೀಕರಣದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಮೈಸೂರು ರಸ್ತೆಯಲ್ಲಿರುವ ಆದಿ ಕವಿ ಪಂಪ ಗ್ರಂಥಾಲಯದ ಬಳಿ ನಿತ್ಯ ವಾಹನ ಮತ್ತು ಪ್ರವಾಸಿಗರ ದಟ್ಟಣೆ ಹೆಚ್ಚಾಗಿರುವುದರಿಂದ ಎರಡು ಶೌಚಾಲಯಗಳನ್ನು ಕಡ್ಡಾಯವಾಗಿ ನಿರ್ಮಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಅಲ್ಪಸಂಖ್ಯಾತ ಇಲಾಖೆ ವತಿಯಿಂದ ₹ 50 ಲಕ್ಷ ಮಂಜೂರಾತಿಯಾಗಿದೆ. ಅದನ್ನೂ ಪಟ್ಟಣ ವ್ಯಾಪ್ತಿಯ 7 ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು ಎಂದು ನುಡಿದರು.

ಪಟ್ಟಣ ವ್ಯಾಪ್ತಿಯ ಬೆಂಗಳೂರು ಮತ್ತು ಮೈಸೂರು ರಸ್ತೆಗಳು ಕಿರಿದಾಗಿದ್ದು, ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ, ಶೀಘ್ರ ರಸ್ತೆ ವಿಸ್ತರಣೆ ಮತ್ತು ಬಾಕ್ಸ್‌ ಟೈಪ್‌ ಒಳ ಚರಂಡಿ ವ್ಯವಸ್ಥೆಯನ್ನು ಅಳವಡಿಸಲು ಶಾಸಕರಿಗೆ ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಸ್‌.ಬಿ.ಜಗದೀಶ್‌ ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಎಸ್‌.ಎಂ.ಲಕ್ಷ್ಮಣ್‌, ಮುಖಂಡರಾದ ಎಸ್‌.ಪಿ.ಮಹೇಶ್‌, ಎಸ್‌.ಪಿ.ಶರತ್‌ಕುಮಾರ್‌, ಲೋಕೇಶ್‌, ಪರಮ ಕೃಷ್ಣೇಗೌಡ, ಕೆ.ಆರ್‌.ರಮೇಶ್‌, ಅಶೋಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.