ADVERTISEMENT

ಸಂಸ್ಕೃತಿ ರಕ್ಷಣೆ, ಧರ್ಮಜಾಗೃತಿಗೆ ರಥಯಾತ್ರೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 9:05 IST
Last Updated 18 ಜೂನ್ 2017, 9:05 IST

ಶ್ರವಣಬೆಳಗೊಳ: ಮಹಾಮಸ್ತಕಾಭಿ ಷೇಕ ನಡೆಸಿಕೊಂಡು ಬಂದಿರುವ ಪರಂಪರೆ ಅಂಗವಾಗಿ ಧರ್ಮ ಜಾಗೃತಿ, ನೈತಿಕ ಉತ್ಥಾನ, ಸಂಸ್ಕೃತಿ ಸಂರಕ್ಷಣೆಗಾಗಿ ಪ್ರಭಾವನಾ ರಥ ಪ್ರವರ್ತನೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಜೈನಮಠದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶನಿವಾರ ಹೇಳಿದರು.

ಅವರು ಚಾವುಂಡರಾಯ ಸಭಾ ಮಂಟಪದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ನಿಮಿತ್ತ ಪ್ರಭಾವನಾ ರಥಯಾತ್ರೆ ಉದ್ಘಾಟನಾ ಸಮಾರಂಭದ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಥಯಾತ್ರೆಗೆ ಚಾಲನೆ ನೀಡಿದ ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಎ.ಮಂಜು, ಚಾಲನೆ ನೀಡಿದರು.

ಮಹಾಮಸ್ತಕಾಭಿಷೇಕಕ್ಕೆ ಪೂರ್ವ ಸಿದ್ಧತೆ ನಡೆದಿದೆ. ಜೂನ್‌ 23ರಂದು ಪಟ್ಟಣದ ಚಿಕ್ಕದೇವರಾಜ ಒಡೆಯರ್‌ ಕಲ್ಯಾಣಿ ಸ್ವಚ್ಛಮಾಡುವುದರ ಮೂಲಕ ಅಧಿಕೃತವಾಗಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು.

ADVERTISEMENT

ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಶಾಶ್ವತ ಯೋಜನೆ ರೂಪಿಸಲಾಗಿದೆ. ಕುಡಿಯುವ ನೀರು, ಸಾರಿಗೆ ಬಸ್‌ ನಿಲ್ದಾಣ, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಪೂರೈಕೆ ಸ್ಥಿತಿ ಉನ್ನತೀಕರಣ, ರಸ್ತೆ ವಿಸ್ತರಣೆ ಹಾಗೂ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.

ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲ ಸ್ವಾಮಿ ಮಾತನಾಡಿದರು. ಅತಿಥಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ವೇದಿಕೆಯಲ್ಲಿ ಪಾವನ ಸಾನಿಧ್ಯ ವಹಿಸಿದ್ದ ಆಚಾರ್ಯ ವರ್ಧಮಾನ ಸಾಗರ ಮಹಾರಾಜರು, ಆಚಾರ್ಯ ವಾಸುಪೂಜ್ಯ ಮಹಾರಾಜ್, ಆಚಾರ್ಯ ಚಂದ್ರಪ್ರಭ ಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳಿಗೆ ಗಣ್ಯರು ಶ್ರೀಫಲ ಅರ್ಪಿಸಿದರು.

ರಥಕ್ಕೆ ಪ್ರತಿಷ್ಠಾಚಾರ್ಯರಾದ ಎಸ್‌.ಡಿ.ನಂದಕುಮಾರ್, ಮತ್ತು  ಉದಯಕುಮಾರ್  ಮಂತ್ರಘೋಷ ಗಳೊಂದಿಗೆ ಪೂಜೆ ನೆರವೇರಿಸಿದರು. ಕಾರ್ಯಾಧ್ಯಕ್ಷ ಎಸ್. ಜಿತೇಂದ್ರ
ಕುಮಾರ್ ಪ್ರಾಸ್ತಾವಿಕ ನುಡಿ ಆಡಿದರು. ಜಿ.ಪಂ.ಸದಸ್ಯರಾದ ಮಮತಾ, ತಾ.ಪಂ. ಮಹಾಲಕ್ಷ್ಮಿ, ಗ್ರಾಮ ಪಂಚಾಯಿತಿಯ ಹೇಮ ಪ್ರಭಾಕರ್, ಕಾರ್ಯದರ್ಶಿ ಎಸ್.ಪಿ. ಭಾನುಕುಮಾರ, ಒಕ್ಕಲಿಗ ಸಂಘದ ನಿರ್ದೇಶಕ ಜತ್ತೇನಹಳ್ಳಿ ರಾಮ ಚಂದ್ರ. ಎಪಿಎಂಸಿ ಸದಸ್ಯ ಎಂ.ಶಂಕರ್, ಪರಮ ಕೃಷ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.