ADVERTISEMENT

ಹೊಗೆಸೊಪ್ಪು ಗಿಡಗಳಿಗೆ ಹುಳುಬಾಧೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 9:27 IST
Last Updated 21 ಜೂನ್ 2017, 9:27 IST
ಕೊಣನೂರು ಸಮೀಪದ ವಡವಾನಹೊಸಹಳ್ಳಿ ಸಮೀಪ ಹೊಗೆಸೊಪ್ಪು ಹೊಲದಲ್ಲಿ ಕಾಣಿಸಿಕೊಂಡಿರುವ ಹಸಿರು ಹುಳುಗಳ ನಿಯಂತ್ರಣಕ್ಕಾಗಿ ಔಷಧಿ ಸಿಂಪಡಿಸುತ್ತಿರುವ ರೈತರು
ಕೊಣನೂರು ಸಮೀಪದ ವಡವಾನಹೊಸಹಳ್ಳಿ ಸಮೀಪ ಹೊಗೆಸೊಪ್ಪು ಹೊಲದಲ್ಲಿ ಕಾಣಿಸಿಕೊಂಡಿರುವ ಹಸಿರು ಹುಳುಗಳ ನಿಯಂತ್ರಣಕ್ಕಾಗಿ ಔಷಧಿ ಸಿಂಪಡಿಸುತ್ತಿರುವ ರೈತರು   

ಕೊಣನೂರು: ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದು ರೈತರು ಹೊಲದಲ್ಲಿ ಹೊಗೆಸೊಪ್ಪು ನಾಟಿ ಮಾಡಿ ಉತ್ತಮ ಬೆಳೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಈಗ ಗಿಡಗಳಿಗೆ ಹುಳುಗಳ ಹಾವಳಿ ಹೆಚ್ಚಿದ್ದು, ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಸಸಿ ಮಡಿಗಳಲ್ಲಿ ಬೆಳೆಸಿದ್ದ ಗಿಡಗಳನ್ನು ಕಿತ್ತು ಸಕಾಲದಲ್ಲಿ ನಾಟಿ ಕಾರ್ಯ ಮುಗಿಸಿ ರೈತರು ಖುಷಿಯಲ್ಲಿದ್ದರು. ಆದರೆ, ನಾಟಿ ಮಾಡಿದ ತರುವಾಯ ಗಿಡಗಳಲ್ಲಿ ಹಸಿರು ಹುಳುಗಳು ಕಾಣಿಸಿಕೊಂಡಿದ್ದು, ರೈತರ ಆಸೆಗೆ ತಣ್ಣೀರೆರಚಿದೆ.

ಹುಳುಗಳ ಕಾಟದಿಂದ ಬೇಸತ್ತ ರೈತರು ಅಂಗಡಿಗಳಲ್ಲಿ ದುಪ್ಪಟ್ಟು ಬೆಲೆ ತೆತ್ತು ಔಷಧಿಗಳನ್ನು ಸಿಂಪಡಿಸುತ್ತಿದ್ದಾರೆ. ಇಷ್ಟಾದರೂ ಕೆಲವು ಕಡೆ ಹುಳುಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಗಿಡಗಳ ಕಾಂಡ ಕೊರೆದು ಬೇರಿನಡಿ ಸೇರಿರುವ ಹುಳುಗಳು ಬೆಳೆಗೆ ಕಂಟಕವಾಗುತ್ತಿವೆ.

ADVERTISEMENT

‘ತಂಬಾಕು ಮಾರಾಟದಿಂದ ಉತ್ತಮ ಆದಾಯ ಹೊಂದುತ್ತಿರುವ ಮಂಡಳಿಯಾಗಲಿ, ಅಧಿಕಾರಿಗಳಾಗಲಿ ಬೆಳೆ ತಾಕುಗಳಿಗೆ ಭೇಟಿ ನೀಡಿ ಹುಳುಗಳ ನಿಯಂತ್ರಣಕ್ಕೆ ಅಗತ್ಯವಿರುವ ಔಷಧಿಗಳನ್ನು ನೀಡುತ್ತಿಲ್ಲ. ನೆಪ ಮಾತ್ರಕ್ಕೆ ಉಚಿತ ಸಲಹೆ ನೀಡುವ ಮಂಡಳಿಯವರು, ರೈತರ ಕಷ್ಟ ಆಲಿಸುತ್ತಿಲ್ಲ’ ಎಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಹೊಗೆಸಪ್ಪು ನಾಟಿಯಾದ ನಂತರ ಬಿರುಸು ಮಳೆಯಾಗಲಿಲ್ಲ. ಮೋಡ ಕವಿದ ವಾತಾವರಣ ಹುಳುಗಳ ಹಾವಳಿ ಹೆಚ್ಚಲು ಕಾರಣವಾಗಿದ್ದು, ಗಿಡಗಳಿಗೆ ಔಷಧಿ ಸಿಂಪಡಿಸಿ ಸಾಕಾಗಿ ಹೋಗಿದ್ದೇವೆ’ ಎನ್ನುತ್ತಾರೆ ರೈತರು.

* * 

ಮಂಡಳಿಯವರಾಗಲಿ, ಮಾರುಕಟ್ಟೆಯಲ್ಲಿ ಹೊಗೆ ಸೊಪ್ಪು ಕೊಳ್ಳುವ ಕಂಪೆನಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ. ರೈತರು ಸಂಕಷ್ಟ ಎದುರಿಸುವಂತಾಗಿದೆ
ಯೋಗಣ್ಣ
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.