ADVERTISEMENT

ಅನುದಾನದ ದುಂದುವೆಚ್ಚ ಸಲ್ಲ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 10:48 IST
Last Updated 16 ಏಪ್ರಿಲ್ 2017, 10:48 IST
ಹಾನಗಲ್‌ನಲ್ಲಿ ಶನಿವಾರ ಕುಡಿಯುವ ನೀರು ಪೂರೈಕೆ ಮತ್ತು ಬರ ನಿರ್ವಹಣೆಗಾಗಿ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಮನೋಹರ ತಹಸೀಲ್ದಾರ್‌ ಮಾತನಾಡಿದರು
ಹಾನಗಲ್‌ನಲ್ಲಿ ಶನಿವಾರ ಕುಡಿಯುವ ನೀರು ಪೂರೈಕೆ ಮತ್ತು ಬರ ನಿರ್ವಹಣೆಗಾಗಿ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಮನೋಹರ ತಹಸೀಲ್ದಾರ್‌ ಮಾತನಾಡಿದರು   

ಹಾನಗಲ್: ಕುಡಿಯುವ ನೀರಿನ ಕಾಮಗಾರಿಗಳು ಮತ್ತು ಬರ ನಿರ್ವಹಣೆ ಕುರಿತು ಶಾಸಕ ಮನೋಹರ ತಹಸೀ ಲ್ದಾರ್ ನೇತೃತ್ವದಲ್ಲಿ ಇಲ್ಲಿನ ತಹಶೀಲ್ದಾರ್‌ ಕಚೇರಿಯ ಸಭಾಂಗಣದಲ್ಲಿ ಶನಿವಾರ ಸಭೆ ನಡೆಯಿತು.ಸಭೆಯಲ್ಲಿ ತಾಲ್ಲೂಕಿನ 41 ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಬರ ನಿರ್ವಹಣೆಗಾಗಿ ನೇಮಕ ಗೊಂಡ 16 ನೋಡಲ್‌ ಅಧಿಕಾರಿಗಳು ಪಾಲ್ಗೊಂಡಿದ್ದರು. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿರುವ ವರದಿಗಳು ಸಭೆಯಲ್ಲಿ ಬಹಿರಂಗೊಂಡವು.

‘ಕಾಟಾಚಾರದ ಕೆಲಸ ಬೇಕಾಗಿಲ. ನೆಪಗಳನ್ನು ಹೇಳಿ ಕೈತೊಳೆದುಕೊಳ್ಳುವ ವ್ಯವಸ್ಥೆ ಸಹಿಸಲು ಸಾಧ್ಯವಿಲ್ಲ’ ಎಂದು ಖಡಕ್‌ ಸೂಚನೆಗಳನ್ನು ನೀಡಿದ ಶಾಸಕ ಮನೋಹರ ತಹಸೀಲ್ದಾರ್‌, ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಎಂಜನಿಯರ್‌ ಅವರ ಅನುಪಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಮಾಹಿತಿಗಳ ಕೊರತೆಯಿಂದ ಪರದಾಡಿದ ಜಿಲ್ಲಾ ಪಂಚಾಯ್ತಿಯ ವಿಭಾಗ ಮಟ್ಟದ ಎಂಜಿನಿಯರ್‌ಗಳು ನೀಡಿದ ವರದಿಗಳಿಂದ ಸಿಟ್ಟಾದ ಶಾಸಕ ತಹಸೀಲ್ದಾರ್, ‘ಕೆಲವೆಡೆ ಕೊಳವೆಬಾವಿ ಕೊರೆಯಿಸಿ ಪೈಪ್‌ಲೈನ್‌ ಅಳವಡಿಸದ್ದಿದ್ದರೆ ಪ್ರಯೋಜನ ಏನು’ ಎಂದು ಪ್ರಶ್ನಿಸಿದರು.

‘ನೀರಿಲ್ಲದೆ ಬತ್ತಿರುವ ಕೊಳವೆ ಬಾವಿಗಳನ್ನು ಮತ್ತಷ್ಟು ಆಳಕ್ಕೆ ಕೊರೆಸುವ ಕೆಲಸವಾಗಬೇಕು. ಅನಾವಶ್ಯಕವಾಗಿ ಹೊಸ ಬಾವಿಗಳನ್ನು ಕೊರೆಯಿಸಿ ವಾರದ ನಂತರ ಬಾವಿಯಲ್ಲಿ ನೀರಿಲ್ಲದಂತಾಗುತ್ತಿದೆ. ಹೀಗಾಗಿ ಹಳೇ ಬಾವಿಗಳ ಪುನಃಶ್ಚೇತನಕ್ಕೆ ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.‘ಕೆಲವು ಗ್ರಾಮಗಳಲ್ಲಿ ವಿದ್ಯುತ್‌ ಅಸಮರ್ಪಕ ಪೂರೈಕೆಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ಬಾಗಿಲು ಮುಚ್ಚಿಕೊಂಡಿವೆ. ಲಕ್ಷಾಂತರ ಮೊತ್ತದಲ್ಲಿ ಸ್ಥಾಪನೆಯಾದ ಘಟಕಗಳು ಜನರ ಬಳಕೆಗೆ ಬರುವಂತಾಗಬೇಕು. ಇದಕ್ಕೆ ಅಗತ್ಯದ ಕ್ರಮ ಕೈಗೊಳ್ಳಬೇಕು’ ಎಂದು ಸಭೆಯಲ್ಲಿದ್ದ ಹೆಸ್ಕಾಂ ಎಂಜಿನಿಯರ್‌ ಎಸ್‌.ಎಸ್‌.ಝಿಂಗಾಡೆ ಅವರಿಗೆ ಸೂಚಿಸಿದರು.

ADVERTISEMENT

‘ಶುದ್ಧ ಕುಡಿಯುವ ನೀರಿನ ಘಟಕಗಳ ಸುಸ್ಥಿತಿಗೆ ಸಂಬಂಧಿಸಿದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು. ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ಹೊಂಡಗಳನ್ನು ನಿರ್ಮಾಣ ಮಾಡಬೇಕು’ ಎಂದು ಹೇಳಿದರು.‘ಪ್ರತಿ ಗ್ರಾಮ ಪಂಚಾಯ್ತಿ ಕಟ್ಟಡದ ಮೇಲೆ ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಸಣ್ಣ ತೊಟ್ಟಿಗಳನ್ನು ಸ್ಥಾಪಿಸಿ ನೀರು ತುಂಬಿಸಬೇಕು’ ಎಂದು ಸಭೆಯಲ್ಲಿ ತಹಸೀಲ್ದಾರ್‌ ಶಕುಂತಲಾ ಚೌಗಲಾ ಸಲಹೆ ನೀಡಿದರು.

ತಾಲ್ಲೂಕು ಮಟ್ಟದ ನೋಡಲ್‌ ಅಧಿಕಾರಿ ಡಾ.ಪರಮೇಶ್ವರ ನಾಯ್ಕ,ಕೃಷಿ ಸಹಾಯಕ ನಿರ್ದೇಶಕ ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಸೀಲ್ದಾರ್‌,ಡಾ.ಜಿ.ಬಸವರಾಜ, ತಾಲ್ಲೂಕು ವೈದ್ಯಾಧಿಕಾರಿ ಡಾ.ಶೀಲಾ. ಎನ್‌.ಡಿ, ಅಕ್ಷರ ದಾಸೋಹ ಅಧಿಕಾರಿ ಎಂ.ಎನ್‌. ಅಡಿವೆಪ್ಪನವರ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.