ADVERTISEMENT

ಊರೊಳಗೆ ಸ್ಮಶಾನ; ಬೇಸತ್ತ ಜನ

ಶವ ಸಂಸ್ಕಾರಕ್ಕೆ ಪರದಾಟ; ರುದ್ರಭೂಮಿ ಸ್ಥಳಾಂತರಕ್ಕೆ ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಮೇ 2018, 12:54 IST
Last Updated 21 ಮೇ 2018, 12:54 IST
ಕುಮಾರಪಟ್ಟಣ ಸಮೀಪದ ಕವಲೆತ್ತು ಗ್ರಾಮದಲ್ಲಿ ಸಿದ್ಧಾರೂಢ ಮಠ ಮತ್ತು ಮನೆಗಳಿಗೆ ಹೊಂದಿಕೊಂಡಂತಿರುವ ಸ್ಮಶಾನ
ಕುಮಾರಪಟ್ಟಣ ಸಮೀಪದ ಕವಲೆತ್ತು ಗ್ರಾಮದಲ್ಲಿ ಸಿದ್ಧಾರೂಢ ಮಠ ಮತ್ತು ಮನೆಗಳಿಗೆ ಹೊಂದಿಕೊಂಡಂತಿರುವ ಸ್ಮಶಾನ   

ಕುಮಾರಪಟ್ಟಣ: ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲಿ ಸ್ಮಶಾನ ಊರ ಹೊರಗೆ ಇರುತ್ತದೆ. ಆದರೆ, ಕುಮಾರಪಟ್ಟಣ ಸಮೀಪದ ಕವಲೆತ್ತು ಗ್ರಾಮದ ಹಿಂದೂ ರುದ್ರಭೂಮಿ, ಊರಿಗೆ ಹೊಂದಿಕೊಂಡಂತಿದೆ. ‌‌‌‌ಹದಿನೈದು ಸಾವಿರ ಜನಸಂಖ್ಯೆ ಇರುವ ಗ್ರಾಮದ ಸ್ಮಶಾನದ ವಿಸ್ತೀರ್ಣ ಕೇವಲ 20 ಗುಂಟೆ.

ಕುರಚಲು ಕಾಡಿನಂತಿರುವ ಸ್ಮಶಾನದ ಸುತ್ತಲೂ ಶ್ರೀ ಸಿದ್ಧಾರೂಢ ಆಶ್ರಮ ಮತ್ತು ಗ್ರಾಮದ ಮನೆಗಳು ಇವೆ. ಹಾಗಾಗಿ, ಗ್ರಾಮಸ್ಥರು ಆತಂಕ ಮತ್ತು ಭಯದಿಂದ ಕಾಲ ಕಳೆಯುವಂತಾಗಿದೆ. ಅಲ್ಲದೆ, ಕತ್ತಲಾದರೆ, ಗ್ರಾಮಸ್ಥರು ಹೊರಗೆ ಬರಲು ಹೆದರುತ್ತಾರೆ ಎಂದು ಸಿದ್ಧಾರೂಢ ಆಶ್ರಮದಲ್ಲಿರುವ ಹನುಮಂತಜ್ಜ ‘ಪ್ರಜಾವಾಣಿ’ಗೆ ಹೇಳಿದರು.

ಊರಿನ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನದ ಜಾಗ ಅಗಲವಾಗಿಲ್ಲ. ನೀರು, ಶವ ಸುಡುವ ಜಾಗ ಸೇರಿದಂತೆ ಮೂಲಸೌಕರ್ಯಗಳು ಕೂಡ ಇಲ್ಲ. ಹಾಗಾಗಿ, ಕೆಲವೊಮ್ಮೆ ಈಗಾಗಲೂ ಹೂತಿದ್ದವರ ಜಾಗದಲ್ಲಿ ಮತ್ತೊಬ್ಬರನ್ನು ಹೂಳಬೇಕಾದ ಸ್ಥಿತಿ ಇದೆ. ಇದು ಕೆಲವೊಮ್ಮೆ ಗ್ರಾಮಸ್ಥರ ಮಧ್ಯೆ ಜಗಳಕ್ಕೂ ಕಾರಣವಾಗುವುದುಂಟು ಎಂದು ಅವರು ತಿಳಿಸಿದರು.

ADVERTISEMENT

ಸೂಕ್ತ ಜಾಗ ಸಿಗದೆ ಕೆಲವೊಮ್ಮೆ ಶವ ಸಂಸ್ಕಾರ ನಡೆದ ಸ್ಥಳದಲ್ಲೇ ಗುಂಡಿ ತೆಗೆಯಲು ಅಗೆದಾಗ, ಅರೆಬರೆ ಕೊಳೆತ ಶವಗಳು ಸಿಕ್ಕಿದ್ದುಂಟು. ಆಗ ಬೇರೆ ಸ್ಥಳದಲ್ಲಿ ಗುಂಡಿ ತೆಗೆದು ಶವವನ್ನು ಹೂತಿದ್ದೇವೆ. ಸ್ಮಶಾನದಲ್ಲಿ ಕೆಲವರು ಶವವನ್ನು ಸುಟ್ಟಾಗ, ಸಂಪೂರ್ಣ ದೇಹ ಬೂದಿಯಾಗದೆ ತಲೆಬುರುಡೆ ಮತ್ತು ಮೂಳೆಗಳು ಅಲ್ಲಲ್ಲೇ ಬಿದ್ದಿರುತ್ತವೆ ಎಂದು ಗ್ರಾಮದ ಗಿರೀಶ್‌ ನಾಯಕ ವಿವರಿಸಿದರು.

ಗ್ರಾಮದಲ್ಲಿ ಇತರೆ ಸಮುದಾಯದವರಿಗೆ ವಿಶಾಲವಾದ ಸ್ಮಶಾನವಿದೆ. ಆದರೆ, ಹಿಂದೂಗಳಿಗೆ ಮೀಸಲಿಟ್ಟಿರುವ ಜಾಗ ಮಾತ್ರ ಅತ್ಯಂತ ಕಿರಿದಾಗಿದೆ. ಇಂತಹದ್ದೊಂದು ಗಂಭೀರ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಇಚ್ಚಾಶಕ್ತಿ ಗ್ರಾಮದ ಜನಪ್ರತಿನಿಧಿಗಳಿಗೆ ಮತ್ತು ಗ್ರಾಮ ಪಂಚಾಯ್ತಿಗೆ ಇಲ್ಲ. ಇನ್ನಾದರೂ, ಪಂಚಾಯ್ತಿಯವರು ಊರಿಗೆ ಹೊಂದಿಕೊಂಡಂತಿರುವ ಸ್ಮಶಾನವನ್ನು ಊರಿನ ಹೊರಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟಕ ಕರಬಸಪ್ಪ ಜಾನಪ್ಪನವರ ಒತ್ತಾಯಿಸಿದರು.

**
ಗ್ರಾಮದಲ್ಲಿ ಜಾಗದ ಸಮಸ್ಯೆ ಇದೆ. ಈ ಕುರಿತು ಪಂಚಾಯ್ತಿ ಹಾಗೂ ಗ್ರಾಮಸ್ಥರ ಸಭೆ ಕರೆದು ಚರ್ಚಿಸಲಾಗುವುದು. ಸ್ಮಶಾನವನ್ನು ಸ್ವಚ್ಚಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಬಸನಗೌಡ ಪಾಟೀಲ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕವಲೆತ್ತು

ಸೂರಲಿಂಗಯ್ಯ ಎನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.