ADVERTISEMENT

ಎಪಿಎಂಸಿ: ಶಾಂತಿಯುತ ಮತದಾನ

ಶನಿವಾರ ಮತ ಎಣಿಕೆ– ಎಲ್ಲೆಡೆ ಸೂಕ್ತ ಬಿಗಿಭದ್ರತೆ; ಹೊಸ ಹೂಲಿಹಳ್ಳಿಯಲ್ಲಿ ಚುನಾವಣೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 5:57 IST
Last Updated 13 ಜನವರಿ 2017, 5:57 IST
ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮತಗಟ್ಟೆಯಲ್ಲಿ ಗುರುವಾರ ತಮ್ಮ ಹಕ್ಕು ಚಲಾಯಿಸಲು ಸರದಿ ನಿಂತ ಮತದಾರರು
ಹಾವೇರಿಯ ಮುನ್ಸಿಪಲ್ ಹೈಸ್ಕೂಲ್ ಮತಗಟ್ಟೆಯಲ್ಲಿ ಗುರುವಾರ ತಮ್ಮ ಹಕ್ಕು ಚಲಾಯಿಸಲು ಸರದಿ ನಿಂತ ಮತದಾರರು   
ಹಾವೇರಿ: ಜಿಲ್ಲೆಯ ಏಳು ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಗುರುವಾರ ನಡೆದ ಮತದಾನವು ಶಾಂತಿಯುತವಾಗಿತ್ತು. ವಿವಿಧ ಗ್ರಾಮಗಳಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಆದರೆ, ಪ್ರತಿಕ್ರಿಯೆ ನೀರಸವಾಗಿತ್ತು.
 
ರಾಣೆಬೆನ್ನೂರು ಹೊಸ ಹುಲಿಹಳ್ಳಿಯ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು. ಅಲ್ಲದೇ, ಹಲಗೇರಿ ಮತ್ತಿತರೆಡೆ ಮತದಾನ ಪಟ್ಟಿಯಲ್ಲಿ ಹೆಸರು ಇಲ್ಲ ಎಂದು ಕೆಲವರು ಪ್ರತಿಭಟಿಸಿದರು. ಉಳಿದಂತೆ, ಎಲ್ಲೆಡೆ ಶಾಂತಿಯುತ ಮತದಾನವಾಯಿತು.  
 
‘ಕೆಲವೆಡೆ ಒಬ್ಬ ವ್ಯಕ್ತಿಯ ಹೆಸರು ಮೂರರಿಂದ ನಾಲ್ಕು ಮತಗಟ್ಟೆಗಳ ಮತದಾರರ ಪಟ್ಟಿಯಲ್ಲಿತ್ತು. ಇನ್ನೂ ಕೆಲವೆಡೆ ಮತದಾರರ ಹೆಸರೇ ಪಟ್ಟಿಯಿಂದ ಬಿಟ್ಟು ಹೋಗಿತ್ತು. ಇಂತಹ ಸಮಸ್ಯೆಗಳು ಕಂಡುಬಂದವು’ ಎಂದು ಬಿಜೆಪಿಯ ಹನುಮಂತ ಬದಾಮಿ ನಾಯಕ, ಸುರೇಶ ದೊಡ್ಮನಿ, ಕರಬಸಪ್ಪ ಹಳದರೂ, ಪ್ರಭು ಹಿಟ್ನಳ್ಳಿ ಮತ್ತಿತರರು ದೂರಿದರು. 
 
‘ಬೇರೆ ಬೇರೆ ಕಡೆ ಹೊಲ ಇರುವವರ ಹೆಸರುಗಳು ಆಯಾ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಅವರು ಒಂದು ಕಡೆ ಮಾತ್ರ ಮತದಾನ ಮಾಡುತ್ತಾರೆ. ಇದರಿಂದ ಒಟ್ಟಾರೆ, ಮತದಾನ ಪ್ರಮಾಣವೂ ಕುಸಿತಗೊಳ್ಳುತ್ತದೆ’ ಎಂದರು.  
 
ಎಪಿಎಂಸಿಗಳ ಒಟ್ಟು 93 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 10 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಪೈಕಿ 83 ಕ್ಷೇತ್ರಗಳ 228 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಗುರುವಾರ ಬರೆದರು. 
 
ಜಿಲ್ಲೆಯಲ್ಲಿ 139 ಸೂಕ್ಷ್ಮ ಮತ್ತು 112 ಅತಿ ಸೂಕ್ಷ್ಮ ಸೇರಿದಂತೆ 590 ಮತಗಟ್ಟೆಗಳಲ್ಲಿ ಒಟ್ಟು 4,46,450 ಮತ ಚಲಾಯಿಸುವ ಹಕ್ಕು ಹೊಂದಿದ್ದರು. 
 
**
ಹಾವೇರಿ ಎಪಿಎಂಸಿ 
ಸ್ಥಳೀಯ ಎಪಿಎಂಸಿಗೆ 94 ಮತಗಟ್ಟೆಗಳಲ್ಲಿ ಗುರುವಾರ ಶಾಂತಿಯುತವಾಗಿ ಮತದಾನ ನಡೆಯಿತು. ಬೆಳಿಗ್ಗೆ ಸ್ವಲ್ಪ ತುರುಸಿನ ಮತದಾನದಂತೆ ಕಂಡು ಬಂದರೂ, ಮಧ್ಯಾಹ್ನದ ವೇಳೆಗೆ ನೀರಸವಾಗಿತ್ತು. ಬೆಳಿಗ್ಗೆ 10 ಗಂಟೆಗೆ ಶೇ 10, ಮಧ್ಯಾಹ್ನ 12ಕ್ಕೆ ಶೇ 21 ಹಾಗೂ ಸಂಜೆ 4ಕ್ಕೆ ಶೇ 41.97 ಮತದಾನವಾಗಿತ್ತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.