ADVERTISEMENT

ಕೊಬ್ಬರಿ ಹೋರಿ: ಸುಗ್ರಿವಾಜ್ಞೆಗೆ ಆಗ್ರಹ

ಕಳಸಾ ಬಂಡೂರಿ ನಾಲಾ ಯೋಜನೆ, ಕಂಬಳಕ್ಕೂ ಕಾನೂನಿನ ಬಲ ತುಂಬಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 9:56 IST
Last Updated 28 ಜನವರಿ 2017, 9:56 IST
ಕೊಬ್ಬರಿ ಹೋರಿ: ಸುಗ್ರಿವಾಜ್ಞೆಗೆ ಆಗ್ರಹ
ಕೊಬ್ಬರಿ ಹೋರಿ: ಸುಗ್ರಿವಾಜ್ಞೆಗೆ ಆಗ್ರಹ   

ಹಾವೇರಿ: ಕಳಸಾ ಬಂಡೂರಿ ನಾಲಾ ಯೋಜನೆ, ಕೊಬ್ಬರಿ ಹೋರಿ, ಗಾಢಾ ಓಡಿಸುವುದು ಹಾಗೂ ಕಂಬಳಗಳಿಗೆ ಮಾನ್ಯತೆ ನೀಡಲು ಸುಗ್ರಿವಾಜ್ಞೆ ಹೊರಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಸದಸ್ಯರು ಶುಕ್ರವಾರ ಇಲ್ಲಿನ ಜಿಲ್ಲಾಡಳಿತದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ .ಎನ್. ಛತ್ರದ ಮಾತನಾಡಿ, ‘ಕರ್ನಾಟಕದ ಕರಾವಳಿಯ ಜಿಲ್ಲೆಗಳಲ್ಲಿ ಕಂಬಳ ಕ್ರೀಡೆ ಬಹು ವಿಶೇಷವಾಗಿದೆ.

ಕೆಸರು ಗದ್ದೆ ಅಥವಾ ನದಿಯ ದಡದ ಮರಳು ದಂಡೆಗಳ ಬದಿಯಲ್ಲಿ ಕೃತಕವಾಗಿ ನಿರ್ಮಿಸಿದ ಟ್ರ್ಯಾಕ್‌ನಲ್ಲಿ ಕೋಣಗಳ ನಡುವೆ ಓಟಗಳ ಪಂದ್ಯ ನಡೆಸಲಾಗುತ್ತದೆ. ಇದನ್ನು ಜನಗ ವಿಶೇಷತೆಯಿಂದ ಗೌರವಿಸುತ್ತಾರೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಹೋರಿ ಬೇದರಿಸುವ ಹಬ್ಬ ಮತ್ತು ಖಾಲಿ ಗಾಢಾ ಓಡಿಸುವ ಕ್ರೀಡೆಯೂ ಪ್ರಮುಖವಾಗಿದೆ.

ರೈತರಾಪಿ ವರ್ಗದ ಪ್ರಮುಖ ಕ್ರೀಡಾ ಹಬ್ಬವಾಗಿದೆ’ ಎಂದರು. ನಮ್ಮ ಕರವೇ ಜಿಲ್ಲಾ ಉಪಾಧ್ಯಕ್ಷ ಸತೀಶ ಎನ್. ಮೇಗಳಮನಿ ಮಾತನಾಡಿ, ‘ಕೃಷಿಕರು ತಮ್ಮ ಮುಂದಿನ ಕೃಷಿ ಯಶಸ್ವಿ ಆಗಲಿ ಎಂದು ಕ್ರೀಡೆಗಳನ್ನು ನಡೆಸುತ್ತಾರೆ. ಅದು ಯುವಕರು, ಕೃಷಿಕರಲ್ಲಿ ಪ್ರೀತಿ ಗೌರವ ಸ್ವಾಭಿಮಾನವನ್ನು ಬೆಳೆಸುತ್ತದೆ. ಕೋಣಗಳಿಗೆ, ಹೋರಿಗಳಿಗೆ ಯಾವುದೇ ರೀತಿಯ ಹಿಂಸೆಯನ್ನು ಕೊಡದೇ ಮನೆಯ ಹಿರಿಯ ಮಗನಂತೆ ಸಾಕುತ್ತಾರೆ. ಅಂತಹ ಕೃಷಿ, ಧಾರ್ಮಿಕ ಹಿನ್ನೆಲೆಯುಳ್ಳ ಕ್ರೀಡೆಗೆ ನಿಷೇಧ ಹೇರುವ ಬದಲಾಗಿ, ಕಾನೂನು ಮಾನ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಕೂಡಲೇ ನಮ್ಮ ಎಲ್ಲ ಬೇಡಿಕೆ ಗಳನ್ನು ಸರ್ಕಾರ ಈಡೇರಿಸಬೇಕು.  ಇಲ್ಲದಿದ್ದರೆ ಉಗ್ರ ಹೋರಾಟ ನಡೆಸು ತ್ತೇವೆ’ ಎಂದು ಹೇಳಿದರು. ಜಿಲ್ಲಾ ಘಟಕದ ಉಪಾಧ್ಯಕ್ಷ ನೂರ್ ಅಹ್ಮದ, ಸವಣೂರ ತಾಲ್ಲೂಕು ಘಟಕದ ಅಧ್ಯಕ್ಷ ಶೇಖಪ್ಪ ಲಮಾಣಿ, ಶಿಗ್ಗಾವಿ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಬೆಂಚಳ್ಳಿ, ಬ್ಯಾಡಗಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಲಕ್ಷ್ಮೀ ಜಿಂಗಾಡೆ, ವಿರೂಪಾಕ್ಷಪ್ಪ ನವಲಗುಂದ, ಮಂಜು ಬಾರ್ಕಿ, ಮಹಮ್ಮದ್‌ ಜಾಫರ್, ಅಬ್ದುಲ್‌ ರೆಹಮಾನ ಲೋಹಾರ, ಅಬ್ದುಲ್‌ ಜುನೇದ ಮೋಮಿನ್‌, ಸುಲೇಮಾನ್‌ ಬಾಷಾ ನದಾಫ, ಸಲೀಂ ಕೊಲಕಾರ, ಮಲ್ಲೇಶ ಚಕ್ರಸಾಲಿ ಮತ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.