ADVERTISEMENT

ತುಂತುರು ಮಳೆ: ಜಿಲ್ಲೆಯ ರೈತರಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 8:36 IST
Last Updated 19 ಜುಲೈ 2017, 8:36 IST

ಹಾವೇರಿ: ಸತತ ಮೂರು ವರ್ಷಗಳ ‘ಬರ’, ತಿಂಗಳು ಕಳೆದರೂ ಸುರಿಯದ ಸಮರ್ಪಕ ‘ಮುಂಗಾರು’, ದಿನೇ ದಿನೇ ನೀರಿಗೆ ಹೆಚ್ಚುತ್ತಿರುವ ಹಾಹಾಕಾರ ಮತ್ತಿತರ ಕಾರಣಗಳಿಂದ ಕಂಗೆಟ್ಟಿದ್ದ ಜಿಲ್ಲೆಯ ಜನತೆಯ ಮೊಗದಲ್ಲಿ ಮಂಗಳವಾರ ಮುಂದಹಾಸ ಮೂಡಿತು. ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ತುಂತುರು ಹಾಗೂ ಹಲವಡೆ ಸಾಧಾರಣ ಮಳೆಯಾಯಿತು.

ಮೇ ಅಂತ್ಯದಲ್ಲಿ ಮುಂಗಾರು ಪೂರ್ವ ಹಾಗೂ ಜೂನ್ ಮೊದಲ ವಾರದಲ್ಲಿ ನೈರುತ್ಯ ಮುಂಗಾರು ಜಿಲ್ಲೆಗೆ ಪ್ರವೇಶಿಸುವುದು ವಾಡಿಕೆ. ಜೂನ್ ಮೊದಲ ವಾರದಲ್ಲಿ ಮಳೆ ಶುರುವಾದರೆ, ಜುಲೈಯಲ್ಲಿ ಮಳೆಯ ಅಬ್ಬರಕ್ಕೆ ಹಳ್ಳ, ಕೆರೆಗಳು ತುಂಬಿ, ನಾಲ್ಕೂ ನದಿಗಳಲ್ಲಿ ಹರಿವು ಆರಂಭಗೊಂಡಿರುತ್ತದೆ. ಈ ಬಾರಿ ಜೂನ್ 7 ರಂದು ಮಳೆಯ ಮುನ್ಸೂಚನೆ ನೀಡಲಾಗಿತ್ತು. ಆದರೆ, ತಿಂಗಳು ಕಳೆದರೂ ನಿರೀಕ್ಷಿತ ಮಳೆ ಸುರಿಯಲಿಲ್ಲ. ಒಂದು ಬಾರಿಯೂ ಭಾರಿ ಮಳೆ ಆಗಲಿಲ್ಲ.

ಸತತ ಬರದಿಂದ ಕಂಗೆಟ್ಟ ರೈತರು ಸೇರಿದಂತೆ ಒಟ್ಟಾರೆ ಜನತೆಯ ಸ್ಥಿತಿ ದಿನೇ ದಿನೇ ಸಂಕಷ್ಟಕ್ಕೀಡಾಯಿತು. ಜಿಲ್ಲೆಯ ಸಾವಿರಕ್ಕೂ ಅಧಿಕ ಕೆರೆಗಳು ಭಣಗುಟ್ಟಿದರೆ, ಶೇ 60ಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿ ಹೋಗಿದ್ದವು. 15 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಜಲ ಮೂಲವೇ ಖಾಲಿಯಾಗಿತ್ತು. 3 ಹಳ್ಳಿಗಳಿಗೆ ಟ್ಯಾಂಕರ್ ನೀರು ಪೂರೈಸಲಾಗಿತ್ತು. 4 ಶುದ್ಧ ಕುಡಿಯುವ ನೀರಿನ ಘಟಕಕ್ಕೇ ಟ್ಯಾಂಕರ್ ನೀರು ನೀಡಲಾಗಿತ್ತು.

ADVERTISEMENT

ಕೊಳವೆ ಬಾವಿಯ ಅಂತರ್ಜಲ ಮಟ್ಟವೂ ಸುಮಾರು ಐದು ಮೀಟರ್‌ ಅಡಿಗೆ ಕುಸಿದಿತ್ತು. ಹೀಗಾಗಿ ‘ಮಳೆ’ಯೇ ಎಲ್ಲದಕ್ಕೂ ಪರಿಹಾರವಾಗಿತ್ತು. ಜನರ ನಿರೀಕ್ಷೆ ಹೆಚ್ಚಿತ್ತು.
ಆದರೆ, ಮುಂಗಾರಿನ ಜುಲೈ ಆರಂಭದ ತನಕವೂ ವಾಡಿಕೆಯ ಶೇ 50ರಷ್ಟೂ ಮಳೆ ಸುರಿಯಲಿಲ್ಲ. ಈ ನಡುವೆ ಮಂಗಳವಾರ ದಿನವಿಡೀ ಸುರಿದ ತುಂತುರು ಮಳೆ ಹೊಸ ಭರವಸೆ ಮೂಡಿಸಿತು.

ಹಾನಗಲ್‌, ರಾಣೆಬೆನ್ನೂರ, ಶಿಗ್ಗಾವಿ, ಹಿರೇಕೆರೂರ  ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಎಡೆಬಿಡದೇ ತುಂತುರು ಹಾಗೂ ಕೆಲವೆಡೆ ಸಾಧಾರಣ ಮಳೆ ಸುರಿದಿದೆ. ಹಾವೇರಿ ನಗರ ಸೇರಿದಂತೆ ಗುತ್ತಲ, ಕರ್ಜಗಿ ಹೋಬಳಿಯಲ್ಲಿ ಮತ್ತು ಸವಣೂರ ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದಲೇ ತುಂತುರು ಮಳೆ ಸುರಿದಿದೆ.

‘ಮಲೆನಾಡಿನ ಸೆರಗು’ ಖ್ಯಾತಿಯ ಹಾವೇರಿ ನಗರದಲ್ಲಿ ವರ್ಷದ ಬಳಿಕ ‘ಮಲೆನಾಡಿ’ನ ವಾತಾವರಣ ಕಂಗೊ ಳಿಸಿತು. ಚುಮು ಚುಮು ಚಳಿ, ಹಸಿ ಯಾದ ಹೊಲ, ಚಿಗುರೊಡೆದು ನಿಂತ ಹಸಿರು ತಂಪು ನೀಡಿತು. ಆದರೆ, ಸಂಜೆ ಯಾಗುತ್ತಲೇ ಮೋಡಗಳ ಪ್ರಮಾಣ ಸ್ವಲ್ಪ ಕಡಿಮೆಯಾಯಿತು. ಉತ್ತಮ ಮಳೆ ಸುರಿದು ಕೆರೆ, ಹಳ್ಳಗಳು ತುಂಬಲಿ ಎಂಬ ರೈತರ ಪ್ರಾರ್ಥನೆ ನಿರಂತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.