ADVERTISEMENT

ಮೆಕ್ಕೆಜೋಳದ ಬೆಲೆ ಕುಸಿತ: ರೈತರಲ್ಲಿ ಆತಂಕ

ಸುರೇಖಾ ಪೂಜಾರ
Published 10 ನವೆಂಬರ್ 2017, 7:05 IST
Last Updated 10 ನವೆಂಬರ್ 2017, 7:05 IST
ಹೊಲದಲ್ಲಿ ಹಾಗೆಯೇ ಬಿಟ್ಟಿರುವ ಕಟಾವಿಗೆ ಬಂದಿರುವ ಗೋವಿನ ಜೋಳ
ಹೊಲದಲ್ಲಿ ಹಾಗೆಯೇ ಬಿಟ್ಟಿರುವ ಕಟಾವಿಗೆ ಬಂದಿರುವ ಗೋವಿನ ಜೋಳ   

ಅಕ್ಕಿಆಲೂರ: ಈ ಭಾಗದ ಪ್ರಮುಖ ಬೆಳೆಯಾಗಿರುವ ಗೋವಿನಜೋಳದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. ಜೊತೆಗೆ ಕಟಾವಿಗೆ ಬಂದ ಗೋವಿನ ಜೋಳದ ಫಸಲನ್ನೂ ರಾಶಿ ಮಾಡಲು ಆಸಕ್ತಿ ತೋರುತ್ತಿಲ್ಲ. ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ ₹1,400–₹1500 ಇದ್ದ ಗೋವಿನ
ಜೋಳದ ಬೆಲೆ, ಈ ವರ್ಷ ₹1000ಕ್ಕೆ ಕುಸಿತ ಕಂಡಿದೆ.

‘ಮಳೆಯ ಅಭಾವ ಸೇರಿದಂತೆ ಮತ್ತಿತರ ಕಾರಣಗಳಿಂದ ಈ ಬಾರಿ ಹೆಚ್ಚಿನ ಜನರು ಗೋವಿನಜೋಳ ಬೆಳೆದಿದ್ದಾರೆ. ಈ ಭಾಗದಲ್ಲಿ ಸರಾಸರಿ ಶೇ 25ರಷ್ಟು ಭೂಮಿಯಲ್ಲಿ ಗೋವಿನ ಜೋಳವಿದೆ. ಭತ್ತ ಬೆಳೆಯುತ್ತಿದ್ದ ಬಹುತೇಕ ರೈತರು ಈ ಸಲ ಗೋವಿನ ಜೋಳ ಬೆಳೆದಿದ್ದಾರೆ’ ಎನ್ನುತ್ತಾರೆ ಪ್ರಮುಖ ರೈತರು.

‘ಹಾನಗಲ್‌ ತಾಲ್ಲೂಕಿನಲ್ಲಿ ಕಳೆದ ವರ್ಷ 17 ಸಾವಿರ ಹೆಕ್ಟೇರ್‌ನಲ್ಲಿ ಗೋವಿನ ಜೋಳ ಬೆಳೆಯಲಾಗಿತ್ತು. ಈ ವರ್ಷ ಮಳೆ ಕೊರೆತೆಯಿಂದ ಭತ್ತ ಬಿಟ್ಟು, ಸಾಕಷ್ಟು ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಹೀಗಾಗಿ ಪ್ರಸಕ್ತ ವರ್ಷ 25 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಗೋವಿನ ಜೋಳ ಬೆಳೆ ಇದೆ’ ಎಂದು ಹಾನಗಲ್‌ ತಾಲ್ಲೂಕು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇಳುವರಿ ಕುಸಿತ: ಭತ್ತದ ಬದಲಿಗೆ ಗೋವಿನಜೋಳ ಬೆಳೆದ ಭೂಮಿಯಲ್ಲಿ ಇಳುವರಿ ಪರವಾಗಿಲ್ಲ. ಆದರೆ, ಪ್ರತಿವರ್ಷ ಗೋವಿನಜೋಳ ಬೆಳೆಯುವ ಪ್ರದೇಶದಲ್ಲಿ ಈ ಸಲ ಇಳುವರಿಯಲ್ಲಿ ಖೋತಾ ಆಗುತ್ತಿದೆ. ಈ ವ್ಯತ್ಯಾಸ ಎಕರೆಗೆ ಮೂರು ಕ್ವಿಂಟಾಲ್‌ನಷ್ಟಿದೆ. ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಯೂ ಇಳುವರಿ ಮೇಲೆ ಪರಿಣಾಮ ಬೀರಿದೆ.ಇದೀಗ ಬೆಲೆಯೂ ಕೈಕೊಟ್ಟಿದೆ’ ಎಂದು ರೈತರು ಅಳಲು ತೋಡಿಕೊಂಡರು.

‘ಗೋವಿನ ಜೋಳದ ಬೆಲೆಯು ಬಹಳ ಕಡಿಮೆ ಆಗಿದೆ. ಬೆಳೆ ತೆಗೆಯಲು ಸಾಕಷ್ಟು ಖರ್ಚು ಮಾಡಿದ್ದೇವೆ. ಆದರೆ, ದರ ಸಿಗುತ್ತಿಲ್ಲ. ಕ್ವಿಂಟಲ್‌ಗೆ ₹1,800 ಸಿಕ್ಕರೆ ಒಳ್ಳೆಯದು. ಆದರೆ, ಬೆಲೆ ಮಾತ್ರ ಹೆಚ್ಚುತ್ತಿಲ್ಲ’ ಎಂದು ಶಾಡಗುಪ್ಪಿಯ ರೈತ ಶಿವಯೋಗಿ ಬಾಳೂರು ಅಳಲು ತೋಡಿಕೊಂಡರು. ‘ಸರ್ಕಾರ ಬೆಂಬಲಬೆಲೆ ನೀಡಿ ಮೆಕ್ಕಜೋಳ ಖರೀದಿಸಬೇಕು’ ಎಂದೂ ಅವರು ಒತ್ತಾಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.