ADVERTISEMENT

ರಾಣೆಬೆನ್ನೂರು: ಹೆಚ್ಚಿದ ಅನ್ನದಾತನ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 9:27 IST
Last Updated 7 ಜುಲೈ 2017, 9:27 IST

ರಾಣೆಬೆನ್ನೂರು: ಮಳೆಯ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ರೈತರು ಮುಂಗಾರು ಕೈಕೊಟ್ಟಿದ್ದರಿಂದ ನಿರಾಸೆಗೊಂಡಿದ್ದಾರೆ. ‘ಕಡಿಮೆ ತೇವಾಂಶ ಇರುವ ಮಣ್ಣಿನಲ್ಲಿ ಹೈಬ್ರೀಡ್್ ಜೋಳ ಬಿತ್ತನೆಗೆ ಮುಂದಾಗಿದ್ದೇವೆ.  ಜುಲೈ ಬಂದರೂ ತಾಲ್ಲೂಕಿನಲ್ಲಿ ಉತ್ತಮ ಮಳೆ ಬಂದಿಲ್ಲ. ಮಳೆಗಾಗಿ ಒಂದು ತಿಂಗಳು ಕಾದರೂ ಪ್ರಯೋಜನವಾಗಿಲ್ಲ. ಬಿತ್ತನೆ ಅವಧಿ ಮುಗಿಯುತ್ತಾ ಬಂದಿದೆ.  

ಗೊಬ್ಬರ, ಬೀಜ ಮನೆಯಲ್ಲಿ ಇಟ್ಟುಕೊಳ್ಳಲೂ ಆಗುತ್ತಿಲ್ಲ. ಆದ್ದರಿಂದ ಸ್ವಲ್ಪ ಹಸಿಯಾಗಿರುವ ನೆಲದಲ್ಲಿಯೇ ಬಿತ್ತನೇ ಮಾಡುವುದು ಅನಿವಾರ್ಯವಾಗಿದೆ’ ಎಂದು ರೈತರು ಬೇಸರ ತೋಡಿಕೊಂಡಿದ್ದಾರೆ.

‘ತಾಲ್ಲೂಕಿನ ಗಂಗಾಪುರ, ಗುಡಗೂರ, ಮೈದೂರು, ಯತ್ತಿನಹಳ್ಳಿ, ಹೊನ್ನತ್ತಿ, ಕೆರಿಮಲ್ಲಾಪುರ, ಇಟಗಿ, ಹಲಗೇರಿ, ಮಣಕೂರ, ಕುದರಿಹಾಳ, ರಡ್ಡಿಯಲ್ಲಾಪುರ, ಯರೇಕುಪ್ಪಿ, ಅಸುಂಡಿ, ಕರೂರು, ಹಿರೇಬಿದರಿ, ಚಳಗೇರಿ, ಕುಪ್ಪೇಲೂರ ಮುಂತಾದ ಕಡೆಗಳಲ್ಲಿ ಒಣ ಮಣ್ಣಿನಲ್ಲಿಯೇ ಈರುಳ್ಳಿ ಮತ್ತು ಬೆಳ್ಳುಳ್ಳಿ ಚೆಲ್ಲಿದ್ದಾರೆ. ನಮ್ಮನ್ನು ದೇವರೇ ಕಾಪಾಡಬೇಕು’ ಎಂದು ಮುಷ್ಟೂರಿನ ರೈತ ರವೀಂದ್ರಗೌಡ ಪಾಟೀಲ ಅಸಹಾಯಕತೆ ತೋಡಿಕೊಂಡಿದ್ದಾರೆ.

ADVERTISEMENT

‘ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗೆ ನೀರು ಬಿಟ್ಟಿದ್ದರಿಂದ ಕಳೆದ ಬಾರಿ ಉತ್ತಮ ಈರುಳ್ಳಿ ಫಸಲು ಬಂದಿತ್ತು. ಬೆಲೆ ಕುಸಿತದಿಂದ ಈರುಳ್ಳಿ ಹೊಲದಲ್ಲಿಯೇ ಕೊಳೆತು ಹೋಯಿತು. ಕೈ ಬಂದ ತುತ್ತು ಬಾಯಿಗೆ ಬರದಂತಾಯಿತು. ಈ ವರ್ಷವೂ ಸಂಕಷ್ಟ ತಪ್ಪುತ್ತಿಲ್ಲ’ ಎಂದು ಗಂಗಾಪುರದ ರೈತ ಅಶೋಕ ಖಂಡಪ್ಪಳವರ ನೋವು ತೋಡಿಕೊಂಡಿದ್ದಾರೆ.

‘ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ತಂದಿದ್ದೇವೆ. ಮಳೆ ಕೊರತೆಯಿಂದ ಬಿತ್ತನೆ ಮಾಡಬೇಕೇ, ಬೇಡವೇ ಎನ್ನುವ ಗೊಂದಲಕ್ಕೆ ಸಿಲುಕಿದ್ದೇವೆ’ ಎಂದು ಬಸಲೀಕಟ್ಟಿ ತಾಂಡಾದ ರೈತ  ಸೋಮಪ್ಪ ಲಮಾಣಿ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.