ADVERTISEMENT

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಸಂತೆ

ಪ್ರಾಣಭಯದಲ್ಲಿ ವ್ಯಾಪಾರಸ್ಥರು, ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 9:27 IST
Last Updated 9 ಏಪ್ರಿಲ್ 2018, 9:27 IST

ಕುಮಾರಪಟ್ಟಣ: ಸಮೀಪದ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ಪ್ರತಿ ಶುಕ್ರವಾರ ನಡೆಯುವ ವಾರದ ಸಂತೆ ರಾಷ್ಟ್ರೀಯ ಹೆದ್ದಾರಿ–4ರ ಪಕ್ಕದಲ್ಲಿಯೇ ನಡೆಯುತ್ತಿದ್ದು, ಹೆದ್ದಾರಿಯಲ್ಲಿ ಬೃಹತ್‌ ವಾಹನಗಳು ಸಂಚರಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಮಧ್ಯಾಹ್ನ ಆರಂಭವಾಗುವ ಸಂತೆ ಕತ್ತಲಾಗುವವರೆಗೂ ನಡೆಯುತ್ತದೆ. ಆದರೆ, ವ್ಯಾಪಾರಿಗಳು ಹಾಗೂ ಗ್ರಾಹಕರು ಕತ್ತಲಿನಲ್ಲಿಯೇ ವ್ಯವಹರಿಸಬೇಕು. ಇಲ್ಲಿ ಯಾವುದೇ ವಿದ್ಯುತ್‌ ಸೌಲಭ್ಯವಿಲ್ಲ. ರಾಷ್ಟ್ರೀಯ ಹೆದ್ದಾರಿಯ ದೂಳು ಹಾಗೂ ಮಣ್ಣಿನಲ್ಲಿಯೇ ವ್ಯಾಪಾರ ನಡೆಯುತ್ತಿದೆ.

ಕೊಡಿಯಾಲ ಹೊಸಪೇಟೆ ಗ್ರಾಮ ಪಂಚಾಯ್ತಿ ಒಟ್ಟು 23 ಸದಸ್ಯರನ್ನು ಹೊಂದಿದ ದೊಡ್ಡ ಪಂಚಾಯ್ತಿಯಾಗಿದ್ದು, ಪಟ್ಟಣ ಪಂಚಾಯ್ತಿ ದರ್ಜೆಗೇರುವ ಹೊಸ್ತಿಲಲ್ಲಿದೆ.
ಆದರೆ, ಗ್ರಾಮದಲ್ಲಿ ನಡೆಯುವ ವಾರದ ಸಂತೆಗೆ ಸ್ವಂತ ಜಾಗ ಹಾಗೂ ಸೂಕ್ತ ಸೌಲಭ್ಯವಿಲ್ಲ.

ADVERTISEMENT

ಅಲ್ಲದೇ, ಸಂತೆಗೆ ಬಂದ ಗ್ರಾಹಕರು ತಮ್ಮ ದ್ವಿಚಕ್ರ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ನಿಲ್ಲಿಸುತ್ತಾರೆ. ಹೀಗಾಗಿ, ಬೃಹತ್‌ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಸಂತೆಯ ಒಳಗೆ ನೀರು ನುಗ್ಗಿ ತರಕಾರಿಗಳು ಕೊಚ್ಚಿಕೊಂಡು ಹೋಗುತ್ತವೆ ಎಂದು ವ್ಯಾಪಾರಿ ದ್ಯಾಮನಾಯ್ಕ ತಿಳಿಸಿದರು.

ಗ್ರಾಮ ಪಂಚಾಯ್ತಿ ವತಿಯಿಂದ ಸಂತೆಗೆ ಯಾವುದೇ ಸೌಲಭ್ಯ ಕಲ್ಪಿಸದೇ ಇದ್ದರೂ ಕೂಡಾ, ಕರ ವಸೂಲಿ ಮಾತ್ರ ಚಾಚೂ ತಪ್ಪದೇ ಮಾಡುತ್ತಿದೆ ಎಂದು ಅವರು ತಿಳಿಸಿದರು.

**

ಗ್ರಾಮದ ವಾರದ ಸಂತೆ ರಾಷ್ಟ್ರೀಯ ಹೆದ್ದಾರಿ–4ರ ಪಕ್ಕದಲ್ಲಿ ನಡೆಯುವ ಕಾರಣಕ್ಕೆ ಅದನ್ನು ಸ್ಥಳಾಂತರಿಸಲು ಈಗಾಗಲೇ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಎಪಿಎಂಸಿ ವತಿಯಿಂದ ₨ 1 ಕೋಟಿ ಕೂಡಾ ಮಂಜೂರಾಗಿದೆ – ದೇವರಾಜ್ ಜಿ,ಪಿಡಿಒ, ಕೊಡಿಯಾಲ ಹೊಸಪೇಟೆ ಪಂಚಾಯ್ತಿ.

**

ಸೂರಲಿಂಗಯ್ಯ ಎನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.