ADVERTISEMENT

‘ರೈತರಿಗೆ ನೆರವಾಗದ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 25 ಮೇ 2017, 9:25 IST
Last Updated 25 ಮೇ 2017, 9:25 IST

ಅಕ್ಕಿಆಲೂರ: ಸತತ ಬರಗಾಲದಿಂದ ತೋಟಗಾರಿಕೆ ಬೆಳೆಗಳು ನೆಲಕಚ್ಚಿದ್ದು, ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ನೀಡುವುದಿಲ್ಲ ಎನ್ನುವ ನಿಲುವಿಗೆ ಅಂಟಿಕೊಳ್ಳದೇ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಯಡಿಯೂರಪ್ಪ ಒತ್ತಾಯಿಸಿದರು.

ಬರ ಅಧ್ಯಯನ ಪ್ರವಾಸದ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿಯ ಈಶ್ವರ ದೇವರ ಕೆರೆ ದಡದಲ್ಲಿರುವ ಸಂಪೂರ್ಣವಾಗಿ ಒಣಗಿ ಹೋಗಿರುವ ತೆಂಗು, ಅಡಿಕೆ ತೋಟದ ವೀಕ್ಷಿಸಿ ಬಳಿಕ ಅವರು ಮಾತನಾಡಿದರು.

ತಾವೂ ಸಹ ತೋಟಗಾರಿಕೆ ಬೆಳೆಗಾರ ಆಗಿದ್ದು, ಕಳೆದ 3 ವರ್ಷಗಳ ಅವಧಿಯಲ್ಲಿ ಮಳೆಯ ಅಭಾವದಿಂದ ತೋಟಗಾರಿಕೆ ಬೆಳೆಗಳು ಸಮಸ್ಯೆಗೆ ಈಡಾಗಿವೆ. ಬೆಳೆಗಾರರ ಸಮಸ್ಯೆಯ ಬಗೆಗೆ ತಮಗೆ ಸಂಪೂರ್ಣ ಅರಿವಿದೆ.

ಬೇರೆ ಬೆಳೆಗಳಿಗೆ ಪರಿಹಾರ ಕಲ್ಪಿಸುವಂತೆ ಸರ್ಕಾರ ತೋಟಗಾರಿಕೆ ಬೆಳೆಗಳಿಗೂ ಕೂಡ ಪರಿಹಾರ ಕಲ್ಪಿಸಲು ಮುಂದಾಗ ಬೇಕಿದೆ. ತಾವು ಕೈಗೊಂಡಿರುವ ಬರ ಅಧ್ಯಯನ ಪ್ರವಾಸದ ಬಳಿಕ ಬೆಂಗಳೂ ರಿನಲ್ಲಿ 3–4 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಿ ಸರ್ಕಾರ ವನ್ನು ಎಚ್ಚರಿಸುವುದಾಗಿ ಹೇಳಿದರು.

ಮಾಜಿ ಸಚಿವ ಸಿ.ಎಂ.ಉದಾಸಿ ಮಾತನಾಡಿ, ಬಡವರು, ರೈತರ ಉದ್ಧಾರ ಬರೀ ಘೋಷಣೆಗಳಿಂದ ಮಾತ್ರ ಸಾಧ್ಯವಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಭ್ರಮೆ ಮೂಡಿಸಿ ಜನರನ್ನು ಯಾಮಾರಿಸು ವುದು ಸುಲಭವಲ್ಲ. ಕಾಂಗ್ರೆಸ್‌ ವಿರುದ್ಧ ಜನ ಎಚ್ಚೆತ್ತುಕೊಂಡಿದ್ದಾರೆ. ರೈತರು, ಬಡವರ ಸಂಕಷ್ಟಕ್ಕೆ ಸ್ಪಂದಿಸದ ಸಿದ್ದ ರಾಮಯ್ಯ ಸರ್ಕಾರ ಕಿತ್ತೆಸೆಯಲು ನಿರ್ಣಯಿಸಿದ್ದಾರೆ ಎಂದರು.

ಮಾಜಿ ಶಾಸಕ ಸುರೇಶಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ಮಾಲತೇಶ ಸೊಪ್ಪಿನ, ಮಾಜಿ ಸದಸ್ಯ ಕೃಷ್ಣ ಈಳಿಗೇರ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಮೆಹಬೂಬಅಲಿ ಬ್ಯಾಡಗಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರದೀಪ ಶೇಷಗಿರಿ, ಪ್ರಮುಖರಾದ ರಾಜಣ್ಣ ಅಂಕಸಖಾನಿ, ಉದಯ ಕುಮಾರ ವಿರಪಣ್ಣನವರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ ಇದ್ದರು.

ರಾಜ್ಯ ಸರ್ಕಾರದ ವಿರುದ್ಧ ರೈತರ ದೂರು
ಧರ್ಮಾ ಅಚ್ಚುಕಟ್ಟು ಪ್ರದೇಶದಲ್ಲಿ ಅಡಿಕೆ, ತೆಂಗು ಸೇರಿದಂತೆ ಇತರ ತೋಟಗಾರಿಕೆ ಬೆಳೆಗಳು ನಾಶವಾಗಿರುವುದಕ್ಕೆ ರಾಜ್ಯ ಸರ್ಕಾರ ಮಳಗಿ ಧರ್ಮಾ ಜಲಾಶಯದಿಂದ ನೀರು ಹರಿಸಲು ಮುತುವರ್ಜಿ ವಹಿಸದಿರುವುದೇ ಕಾರಣ. ಕೂಡಲೇ ಸರ್ಕಾರ ನಷ್ಟಕ್ಕೀಡಾದ ಬೆಳೆಗಾರರಿಗೆ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಬುಧವಾರ ಪಟ್ಟಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸಂವಾದ ನಡೆಸಿದ ರೈತ ಮುಖಂಡರಾದ ಸುಭಾಷ್ ಜಂಬೂರ್, ರಾಜಣ್ಣ ಅಂಕಸಖಾನಿ, ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ಕೆರೆ–ಕಟ್ಟೆಗಳಿಗೆ ನೀರು ಹರಿಸುವಂತೆ ಸಾಕಷ್ಟು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಆಗ್ರಹಿಸಿದರೂ ಪ್ರಯೋಜನವಾಗಿಲ್ಲ. ಕೆರೆ–ಕಟ್ಟೆಗಳಿಗೆ ನೀರು ಹಾಯಿಸಿದ್ದರೆ ಇಷ್ಟು ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳು ಹಾನಿಯಾಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.