ADVERTISEMENT

ವೈದ್ಯರಿಂದ ‘ಬೆಳಗಾವಿ ಚಲೋ’ 13ಕ್ಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 7:13 IST
Last Updated 13 ನವೆಂಬರ್ 2017, 7:13 IST

ಹಾವೇರಿ: ‘ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆ(ಕೆ.ಪಿ.ಎಂ.ಇ.) ತಿದ್ದುಪಡಿಗೆ ವಿರೋಧಿಸಿ ಇದೇ 13ರಂದು ರಾಜ್ಯದ ಎಲ್ಲ ಜಿಲ್ಲೆಯ ಖಾಸಗಿ ವೈದ್ಯರು, ಬೆಳಗಾವಿ ಚಲೋ ಮೂಲಕ ಬೆಳಗಾವಿಯ ಸುವರ್ಣ ಸೌಧದ ಎದುರು ಬೃಹತ್‌ ಪ್ರತಿಭಟನೆ ಮಾಡಲಾಗುವುದು’ ಎಂದು ಭಾರತೀಯ ವೈದ್ಯಕೀಯ ಸಂಘ ರಾಜ್ಯ ಘಟಕದ ಅಧ್ಯಕ್ಷ ಡಾ.ರವೀಂದ್ರ ಎಚ್‌.ಎನ್‌. ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿಭಟನೆಯಲ್ಲಿ ರಾಜ್ಯದ ಸುಮಾರು 25 ಸಾವಿರಕ್ಕೂ ಹೆಚ್ಚು ಖಾಸಗಿ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಪ್ರತಿಭಟನೆಗೆ ಸ್ಪಂದಿಸದೇ ಇದ್ದರೆ ಮರುದಿನ (ನ.14ರಂದು) ಸುವರ್ಣ ಸೌಧದ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು’ ಎಂದು ತಿಳಿಸಿದರು.

‘ಒಂದು ವೇಳೆ ಕಾಯಿದೆ ಸದನದಲ್ಲಿ ಅಂಗೀಕಾರವಾದರೆ ಆ ಕ್ಷಣದಿಂದಲೇ ಎಲ್ಲ ಖಾಸಗಿ ವೈದ್ಯರು ಅನಿರ್ದಿಷ್ಠಾವಧಿ ವರೆಗೆ ವೃತ್ತಿಯನ್ನು ತ್ಯಜಿಸುತ್ತೇವೆ’ ಎಂದೂ ಅವರು ಎಚ್ಚರಿಸಿದರು. ‘ಕಾಯಿದೆಗೆ ಸಂಬಂಧಪಟ್ಟಂತೆ ಖಾಸಗಿ ವೈದ್ಯರು ಮುಷ್ಕರ ನಡೆಸಿದರೆ, ಆರೋಗ್ಯ ಸಚಿವ ರಮೇಶಕುಮಾರ ಖಾಸಗಿ ವೈದ್ಯರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಈ ಕಾಯಿದೆ ಅನುಷ್ಠಾನವಾದರೆ ಖಾಸಗಿ ವೈದ್ಯರು ತುರ್ತು ಸಂದರ್ಭಗಳಲ್ಲಿ ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಬೇಕಾಗುತ್ತದೆ. ಆಗ ರೋಗಿ ಸಾವಿಗೀಡಾದರೆ ಯಾರು ಹೊಣೆ? ಈಗಾಗಲೇ ಜಿಲ್ಲಾ ಗ್ರಾಹಕರ ನ್ಯಾಯಾಲಯ ಹಾಗೂ ವೈದ್ಯಕೀಯ ಪರಿಷತ್‌ ರೋಗಿಗಳಿಗೆ ನ್ಯಾಯ ಕೊಡಿಸುವ ಸಂಸ್ಥೆಗಳಾಗಿವೆ’ ಎಂದು ವಿವರಿಸಿದರು.

‘ಒಂದು ವೇಳೆ ಈ ಕಾಯಿದೆ ಅನುಷ್ಠಾನಕ್ಕೆ ಬಂದರೆ ಖಾಸಗಿ ವೈದ್ಯರು ತಿಂಗಳ ಪೂರ್ತಿ ಕೋರ್ಟ್‌ಗೆ ಅಲೆದಾಡಬೇಕಾಗುತ್ತದೆ. ಸರ್ಕಾರಕ್ಕೆ ಜಿಲ್ಲಾ ಆಸ್ಪತ್ರೆಗಳಿಗೆ ಈ ವರೆಗೂ ಸಿಟಿ ಸ್ಕ್ಯಾನ್‌ ಹಾಗೂ ಎಂಆರ್‌ಐ ಯಂತ್ರದ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಆದರೆ, ಕೋಟಿಗಟ್ಟಲೆ ಬಂಡವಾಳ ಹೂಡಿ ಎಲ್ಲ ಸೌಲಭ್ಯಗಳನ್ನು ನೀಡುತ್ತಿರುವ ಖಾಸಗಿ ವೈದ್ಯರನ್ನು ಸುಲಿಗೆಕೋರರು ಎಂದು ಕರೆಯುವುದು ಯಾವ ಸಂಸ್ಕೃತಿ’ ಎಂದು ಅವರು ಪ್ರಶ್ನಿಸಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ಈಗಾಗಲೇ ಜಾರಿಗೆ ತಂದ ಯಶಸ್ವಿನಿ, ಸುವರ್ಣ ಆರೋಗ್ಯ ಟ್ರಸ್ಟ್‌, ಬಾಲ ಸಂಜೀವಿನಿ ಹಾಗೂ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮಗಳ ಮೂಲಕ ಸರ್ಕಾರ ನಿಗದಿಪಡಿಸಿದ ದರಗಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದಾಗ್ಯೂ ಅವರು ದರಪಟ್ಟಿ ಹಾಕುವುದು ಯಾವ ನ್ಯಾಯ’ ಎಂದು ಕೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯ ವೈದ್ಯಕೀಯ ಸಂಘ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಡಾ.ಪ್ರಭಾಕರ್‌. ಉಪಾಧ್ಯಕ್ಷ ಡಾ.ಹರೀಶ ಡಿ., ಜಿಲ್ಲಾ ಘಟಕದ ಅಧ್ಯಕ್ಷ ಡಾ.ಗೌತಮ್‌ ಲೋಡಾಯಿ ಹಾಗೂ ಕಾರ್ಯದರ್ಶಿ ಡಾ.ಗೀರೀಶ ಮಲ್ಲಾಡದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.