ADVERTISEMENT

ಶತಮಾನದ ಶಾಲೆಯಲ್ಲಿ ಶಿಥಿಲ ಕೊಠಡಿಗಳು!

ಮುಕ್ತೇಶ ಕೂರಗುಂದಮಠ
Published 24 ನವೆಂಬರ್ 2017, 8:12 IST
Last Updated 24 ನವೆಂಬರ್ 2017, 8:12 IST
ರಾಣೆಬೆನ್ನೂರಿನ ಮೇಡ್ಲೇರಿ ಶಾಲಾ ಕಟ್ಟಡದ ನೋಟ
ರಾಣೆಬೆನ್ನೂರಿನ ಮೇಡ್ಲೇರಿ ಶಾಲಾ ಕಟ್ಟಡದ ನೋಟ   

ರಾಣೆಬೆನ್ನೂರು: ಇಲ್ಲಿನ ಮೇಡ್ಲೇರಿ ಗ್ರಾಮದ ಶತಮಾನ ಕಂಡ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಕಟ್ಟಡಗಳು ಶಿಥಿಲಗೊಂಡಿದ್ದು, ಅಪಾಯದ ತೂಗುಗತ್ತಿ ಅಡಿಯಲ್ಲೇ ಪಾಠ–ಪ್ರವಚನಗಳು ನಡೆಯುತ್ತಿವೆ.

ಈ ಶಾಲೆಯ 9 ಕೊಠಡಿಗಳಲ್ಲಿ 5 ಶಿಥಿಲಗೊಂಡರೆ, 2ರ ಚಾವಣಿ ಮುರಿದು ಬಿದ್ದಿವೆ. ಹೀಗಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜೀವ ಕೈಲಿ ಹಿಡಿದುಕೊಂಡು ತರಗತಿಯಲ್ಲಿ ಕಾಲ ಕಳೆಯಬೇಕಾಗಿದೆ.

2 ಕೊಠಡಿಗಳ ಮೇಲ್ಚಾವಣಿಗಳ ತೊಲೆಗಳು ಮುರಿದು ಬಿದ್ದರೆ, ಇನ್ನೆರಡು ಕೊಠಡಿಗಳ ಮೇಲ್ಚಾವಣಿ ಕಟ್ಟಿಗೆ ತೊಲೆಗಳು ಈಚೆಗೆ ಸುರಿದ ಮಳೆಗೆ ಕುಸಿದಿವೆ. ಈ ಕೊಠಡಿಗಳು ಯಾವುದೇ ಸಂದರ್ಭದಲ್ಲಿ ಬೀಳುವ ಸ್ಥಿತಿಯಲ್ಲಿವೆ. ಇದರಿಂದಾಗಿ ಮಕ್ಕಳು ಚಳಿ, ಮಳೆ, ಗಾಳಿಯಲ್ಲಿ ಹೊರಗಡೆ ಕುಳಿತು ಪಾಠ ಕೇಳುವ ಸ್ಥಿತಿ ಉಂಟಾಗಿದೆ.

ADVERTISEMENT

‘ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ಶ್ರೀಧರ್ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲಧಿಕಾರಿಗಳ ಗಮನಕ್ಕೆ ತಂದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ಎಚ್‌.ಎಚ್‌.ದೊಡ್ಡಮನಿ

ಶಿಥಿಲಗೊಂಡ ಕಟ್ಟಡಗಳ ಬಗ್ಗೆ ಮೂರು ವರ್ಷಗಳಿಂದ ಸತತವಾಗಿ ಕ್ಷೇತ್ರ ಬಿಆರ್‌ಪಿ, ಸಿಆರ್‌ಪಿ, ಶಿಕ್ಷಣಾಧಿಕಾರಿ, ಉಪನಿರ್ದೇಶಕರು ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ (ಎಸ್‌ಡಿಎಂಸಿ) ಅಧ್ಯಕ್ಷ ಹನುಮಂತಪ್ಪ ಹೊನ್ನಪ್ಪಳವರ ದೂರುತ್ತಾರೆ.

ಮೇಡ್ಲೇರಿಯು ತಾಲ್ಲೂಕಿನಲ್ಲೇ ಅತಿ ದೊಡ್ಡ ಗ್ರಾಮವಾಗಿದೆ. ಈ ಶಾಲೆಯಲ್ಲಿ 9 ಶಿಕ್ಷಕರಿದ್ದು, 252 ಮಕ್ಕಳು ಕಲಿಯುತ್ತಿದ್ದಾರೆ. ಆದರೆ, ಕೊಠಡಿಗಳ ದುಸ್ಥಿತಿಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಈಚೆಗೆ ಸುರಿದ ಭಾರಿ ಮಳೆಗೆ ಕಟ್ಟಿಗೆ ತೊಲೆಗಳು ಮುರಿದು ಬಿದ್ದಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ ಎನ್ನುತ್ತಾರೆ ಅವರು.

ಶಾಲಾ ಕಟ್ಟಡವನ್ನು ದುರಸ್ತಿ ಮಾಡಿಸದಿದ್ದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತೇವೆ ಎಂದು ಎಸ್‌ಡಿಎಂಸಿ ಸದಸ್ಯ ಮಾಲತೇಶ ಕುರುಡಪ್ಪಳವರ, ಮೈಲಪ್ಪ ನಡುವಿನಮನಿ, ಪರಮೇಶ ಪೂಜಾರ ಎಚ್ಚರಿಕೆ ನೀಡಿದ್ದಾರೆ.

* * 

ಕಟ್ಟಿಗೆ ಬದಲಾಗಿ ಕಬ್ಬಿಣದ ತೊಲೆಗಳನ್ನು ಹಾಕಿಸಲಿ. ಚಾವಣಿಗೆ ಕನಿಷ್ಠ ತಗಡಿನ ಶೀಟುಗಳನ್ನಾದರೂ ಹಾಕಿಸಿ ಕೊಡುವಂತೆ ಶಾಸಕರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಸದಸ್ಯರಿಗೆ ಮನವಿ ಮಾಡಲಾಗಿದೆ
ಹನುಮಂತಪ್ಪ ಹೊನ್ನಪ್ಪಳವರ
ಅಧ್ಯಕ್ಷ, ಎ.ಸ್‌.ಡಿ.ಎಂ.ಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.