ADVERTISEMENT

ಸುಳ್ಳು ಆರೋಪದಿಂದ ಅಭಿವೃದ್ಧಿಗೆ ಹಿನ್ನಡೆ

ಬಿಜೆಪಿ ವಿರುದ್ಧ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಸಲೀಂ ಅಹ್ಮದ್ ಆರೋಪ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 12:52 IST
Last Updated 6 ಮಾರ್ಚ್ 2017, 12:52 IST
ಸುಳ್ಳು ಆರೋಪದಿಂದ ಅಭಿವೃದ್ಧಿಗೆ ಹಿನ್ನಡೆ
ಸುಳ್ಳು ಆರೋಪದಿಂದ ಅಭಿವೃದ್ಧಿಗೆ ಹಿನ್ನಡೆ   
ಹಾನಗಲ್: ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಯಾಗಿ ನೇಮಕಗೊಂಡ ಸಲೀಂ ಅಹ್ಮದ್‌ ಅವರನ್ನು ಭಾನುವಾರ ಇಲ್ಲಿನ ಮಾವಿನಮಂಡಿಯಲ್ಲಿ ಶಾಸಕ ಮನೋ ಹರ ತಹಸೀಲ್ದಾರ್‌ ನೇತೃತ್ವದಲ್ಲಿ ತಾಲ್ಲೂಕಿನ ಕಾಂಗ್ರೆಸ್‌ ಕಾರ್ಯಕರ್ತರು ಸನ್ಮಾನಿಸಿದರು.
 
‘ಕೇಂದ್ರದ ಯೋಜನೆಗಳ ಲಾಭ ರಾಜ್ಯ ತರುವ ನಿಟ್ಟಿನಲ್ಲಿ ಅರ್ಪಣಾ ಭಾವದಿಂದ ಕಾರ್ಯ ನಿರ್ಹಿಸುತ್ತೇನೆ’ ಎಂದು ಸನ್ಮಾನ ಸ್ವೀಕರಿಸಿದ ಸಲೀಂ ಅಹ್ಮದ್‌ ಹೇಳಿದರು.
 
‘ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಮತ್ತು ಸಚಿವರೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಮೂಲಕ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅಗತ್ಯದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕೆಲಸ ಮಾಡುತ್ತೇನೆ. ಈ ನಾಲ್ಕು ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗಬೇಕಾದ ಸಾಕಷ್ಟು ಕೆಲಸಗಳಿವೆ. ಅವುಗಳಿಗೆ ವೇಗ ನೀಡುವ ಉದ್ದೇಶ ಇಟ್ಟುಕೊಂಡಿದ್ದೇನೆ’ ಎಂದರು.
 
‘ಸುಳ್ಳು ಭರವಸೆಗಳನ್ನು ನೀಡುವ ಪ್ರಧಾನಿ ಮೋದಿ ಘೋಷಿಸಿದ ಯೋಜನೆಗಳು ಬಹುತೇಕ ಅನುಷ್ಠಾನಕ್ಕೆ ಬರುತ್ತಿಲ್ಲ. ಈಗ ಜನರನ್ನು ಸುಲಭವಾಗಿ ನಂಬಿಸಲು ಸಾಧ್ಯವಿಲ್ಲ, ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಹುಟ್ಟುಹಾಕುವ ಹುನ್ನಾರಗಳು ನಡೆಯುತ್ತಿವೆ. ಇದು ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ’ ಎಂದರು.
 
ಶಾಸಕ ಮನೋಹರ ತಹಶೀಲ್ದಾರ ಮಾತನಾಡಿ, ‘ಸಲೀಂ ಅಹ್ಮದ್ ಜಾತ್ಯತೀತ ನಾಯಕ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಲೀಂ ಅಹ್ಮದ್‌ ಅಲ್ಪ ಅಂತರದಲ್ಲಿ ಸೋಲು ಅನುಭವಿಸಿದರೂ ಕೂಡ ಹಾವೇರಿ ಲೋಕಸಭಾ ಕ್ಷೇತ್ರದ ಬಗ್ಗೆ ವಿಶೇಷ ಅಭಿಮಾನವಿದೆ’ ಎಂದರು.
 
ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಡಿ.ಬಸವರಾಜಪ್ಪ, ನಿವೃತ್ತ ಜಿಲ್ಲಾಧಿಕಾರಿ ಬಿ.ಶಿವಪ್ಪ, ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್ಎಫ್ಎನ್ ಗಾಜಿಗೌಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್.ಬಡಿಗೇರ, ಶಿವಯೋಗಿ ಹಿರೇ ಮಠ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಶೀಲ್ದಾರ, ಟಾಕನಗೌಡ ಪಾಟೀಲ ಇದ್ದರು. 
 
ಮುಖಂಡರಾದ ನಾಸಿರಖಾನ ಪಠಾಣ, ರಾಜಶೇಖರ ಸಾಲಿಮಠ, ಯಾಸಿರಖಾನ ಪಠಾಣ, ಎ.ಎಂ.ಪಠಾಣ, ಸರಳಾ ಜಾಧವ, ಕಲವೀರಪ್ಪ ಪವಾಡಿ, ಮಹದೇವಪ್ಪ ಬಾಗಸರ, ಪುಟ್ಟಪ್ಪ ವಾಸನದ, ಪರಸಪ್ಪ ಮಡಿವಾಳರ, ಸರ್ವರ್‌ಅಹಮದ್‌ಪಾಷಾ ಪೀರಜಾದೆ,  ಸಿದ್ದನಗೌಡ ಪಾಟೀಲ ಇದ್ದರು.
 
* ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿರೋಧಿಸುವುದೇ ಬಿಜೆಪಿಯವರ ಚಾಳಿಯಾಗಿದೆ. ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ
ಸಲೀಂ ಅಹ್ಮದ್‌, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.