ADVERTISEMENT

ಹೃದಯ ತಪಾಸಣಾ ಶಿಬಿರ

ರಾಣೆಬೆನ್ನೂರಿನಲ್ಲಿ ವಿವಿಧ ಆಸ್ಪತ್ರೆಗಳ ಸಹಯೋಗದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:28 IST
Last Updated 5 ಜನವರಿ 2017, 10:28 IST

ರಾಣೆಬೆನ್ನೂರು: ಆಧುನಿಕತೆಯಲ್ಲಿ ಯಂತ್ರದಂತೆ ಬದುಕು ಸವೆಸುತ್ತಿರುವ ಬಹುತೇಕರು ತಮ್ಮ ಆರೋಗ್ಯ ಕಾಪಾಡಿ ಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಉತ್ತಮವಾಗಿ ಬಾಳಿ ಬದುಕಲು ಅನೇಕ ಆಸ್ಪತ್ರೆಗಳು ಸ್ವಯಂ ಪ್ರೇರಿತರಾಗಿ ಉಚಿತ ತಪಾಸಣೆ ನಡೆಸುತ್ತಿರುವುದು ಆರೋಗ್ಯ ಕರ ಬೆಳವಣಿಗೆಯಾಗಿದೆ ಎಂದು  ನಗರ ಸಭೆ ಪೌರಾಯುಕ್ತ ಡಾ.ಮಹಾಂತೇಶ ಎನ್ ಹೇಳಿದರು.

ನಗರದ ಎಂ.ಕೆ.ಪವಾರ ಮೆಮೋರಿಯಲ್ ಸೊಸೈಟಿ, ಅಮೃತಂ ಆಯುರ್ವೇದ ಆಸ್ಪತ್ರೆ ಹಾಗೂ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಶ್ರಯದಲ್ಲಿ ಅಮೃತಂ ಆಯುರ್ವೇದ ಆಸ್ಪತ್ರೆಯಲ್ಲಿ ಬುಧವಾರ ನಡೆದ ಬೃಹತ್ ಉಚಿತ ಹೃದಯ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದು ಎಷ್ಟೋ ರೋಗಿಗಳು ಬಡತನದಿಂದ ಬಳಲುತ್ತಿದ್ದು, ಅನೇಕರು ಚಿಕಿತ್ಸೆಗಾಗಿ ಪರದಾಡುವಂತಹ ವಾತಾ ವರಣ ಹೆಚ್ಚಾಗಿ ಕಂಡು ಬರುತ್ತದೆ. ಇಲ್ಲಿನ ಅಮೃತಂ ಆಯುರ್ವೇದ ಆಸ್ಪತ್ರೆಯು ಪ್ರತಿ ತಿಂಗಳು ವಿವಿಧ ರೋಗಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುತ್ತ ಬಂದಿರುವುದು ನಿಜಕ್ಕೂ ಶ್ಲ್ಯಾಘನೀಯ ಎಂದರು.

ಅಮೃತಂ ಆಯುರ್ವೇದ ಆಸ್ಪತ್ರೆಯ ಡಾ.ನಾರಾಯಣ ಪವಾರ ಮಾತನಾಡಿ, ಅನಾದಿ ಕಾಲದಿಂದಲು ನಮ್ಮ ಪೂರ್ವಜರು ಹಾಗೂ ಋಷಿ ಮುನಿಗಳು ಸರ್ವರೋಗಗಳಿಗೆ ಆಯುರ್ವೇದ ಚಿಕಿತ್ಸಾ ಪದ್ಧತಿಗಳನ್ನು ಹೆಚ್ಚಾಗಿ ಬಳಕೆ ಮಾಡಿ ಅನೇಕ ಮಾರಕ ರೋಗಗಳನ್ನೂ ಸಹ ಗುಣಪಡಿಸುತ್ತಿದ್ದರು ಎಂದರು.

ಆಯುರ್ವೇದ ಬಳಕೆಯ ಪದ್ಧತಿ ಯನ್ನು ಅನುಸರಿಸಿದವರು ಉತ್ತಮ ವಾದ ಆರೋಗ್ಯವನ್ನು ಹೊಂದುವುದರ ಜೊತೆಗೆ ಸಮಾಜದಲ್ಲಿ ಉತ್ತಮವಾದ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದರು.    

ತಹಶೀಲ್ದಾರ್ ರಾಮಮೂರ್ತಿ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ರವಿ,  ಕೆಎಂಪಿ ಮಣಿ, ಕಾಶಿನಾಥ ಪವಾರ, ಅಮೃತಂ ಆಯುರ್ವೇದ ಆಸ್ಪತ್ರೆಯ ಡಾ. ಶ್ರೀಕಾಂತ ಕಳಸದ, ಎಸ್.ರಜನಿಕಾಂತ, ಶಿವಕುಮಾರ ಪಾಟೀಲ, ಚಂದ್ರಶೇಖರಯ್ಯ ಹಿರೇಮಠ, ವಿನಾಯಕ ಲದ್ವಾ, ಶಿವಕುಮಾರ ಮೈದೂರು ಮತ್ತಿತರರು ಇದ್ದರು.

ಡಾ.ಲೋಲಿತ್ ಸಿದ್ದಾರ್ಥ,  ಡಾ.ಸಿದ್ದಾರ್ಥ ಹಾಗೂ ತಂಡದವರು  200ಕ್ಕೂ ಹೆಚ್ಚು ರೋಗಿಗಳನ್ನು ಶಿಬಿರದಲ್ಲಿ ತಪಾಸಣೆ ಮಾಡಿದರು. ೫ಕ್ಕೂ ಅಧಿಕ ರೋಗಿಗಳನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT