ADVERTISEMENT

ಕೈದಿ ಮಗಳಿಗೆ ಹೆಸರಿಟ್ಟ ಜಿಲ್ಲಾಧಿಕಾರಿ

ಹರ್ಷವರ್ಧನ ಪಿ.ಆರ್.
Published 24 ಜನವರಿ 2018, 11:21 IST
Last Updated 24 ಜನವರಿ 2018, 11:21 IST

ಹಾವೇರಿ: ಹರ್ಷಿತಾ, ಹರ್ಷಿತಾ, ಹರ್ಷಿತಾ... ಕೈಯಲ್ಲಿ ಕಂಕಣ ಧರಿಸಿ, ಸಂಪ್ರದಾಯ ಪ್ರಕಾರ ತೊಟ್ಟಿಲಲ್ಲಿ ಮಲಗಿದ ಪುಟ್ಟ ಕಂದಮ್ಮನ ಕಿವಿಯಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಪಿಸುಗುಟ್ಟಿದರು. ಆಗ ತಾನೆ ಹಾಲುಂಡ ಕೆಂಪು ಕೆನ್ನೆಗಳ 20 ದಿನಗಳ ಹಸುಳೆಗೆ ‘ಹರ್ಷಿತಾ’ ಎಂದು ನಾಮಕರಣವಾಯಿತು.

ಕಳವು ಪ್ರಕರಣವೊಂದರ ವಿಚಾರ ಣಾಧೀನ ಕೈದಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮಹಾಲಿಂಗಪುರದ 26 ವರ್ಷದ ಮಹಿಳೆಯು ಜ.4ರಂದು ಜನ್ಮ ನೀಡಿದ್ದ ಹೆಣ್ಣು ಮಗುವಿನ ನಾಮಕರಣವು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ಸಂಜೆ ನಡೆಯಿತು.

‘ಹರ್ಷಿತಾ... ನೀನು ಚೆನ್ನಾಗಿ ಕಲಿತು ಜಿಲ್ಲಾಧಿಕಾರಿಯಾಗು. ನಿನಗೆ ಹೆಸರಿಟ್ಟವರಂತೆ ಒಳ್ಳೆ ಅಧಿಕಾರಿಯಾಗು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಟಿ. ಶಿಲ್ಪಾ ನಾಗ್ ಮುದ್ದಿನಿಂದ ಹರಸಿದರು.

ADVERTISEMENT

ಮಗುವಿನ ತಾಯಿಯ ಮೊಗದಲ್ಲಿ ನೋವು ಮರೆಯಾಗಿ, ಮಂದಹಾಸ ಮೂಡಿದರೆ, 2 ವರ್ಷದ ಆರುಷಿ (ಮೊದಲ ಮಗಳು) ಅತಿಥಿಗಳನ್ನೇ ಸಂಭ್ರಮದಿಂದ ನೋಡುತ್ತಿದ್ದಳು. ಸೇರಿದ ಅಧಿಕಾರಿ, ಸಿಬ್ಬಂದಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

‘ಕಾರಾಗೃಹದಲ್ಲಿ ಬದಲಾವಣೆ ತರಲು ಕಾರಣರಾದ ಜಿಲ್ಲಾಧಿಕಾರಿಗಳು (ಸಂದರ್ಶಕರ ಮಂಡಳಿ ಅಧ್ಯಕ್ಷರು) ನಾಮಕರಣ ಮಾಡಬೇಕು ಎಂದು ತಾಯಿ ಜೈಲು ಅಧಿಕಾರಿಗಳ ಬಳಿ ತಾಯಿ ವಿನಂತಿಸಿದ್ದಳು. ಅಲ್ಲದೇ,
ಪೋಷಕರ ಇಚ್ಛೆಯಂತೆ ‘ಹ’ ಅಕ್ಷರದಿಂದ ಬರುವ ಹೆಸರನ್ನು ಇಡಲಾಯಿತು’ ಎಂದು ಜೈಲು ಸಿಬ್ಬಂದಿಯೊಬ್ಬರು ತಿಳಿಸಿದರು.

ಜೈಲಿನ ಅಧಿಕಾರಿ, ಸಿಬ್ಬಂದಿ, 11 ಮಹಿಳಾ ಕೈದಿಗಳು, ಕಾರಾಗೃಹದ ಉಪ ಅಧೀಕ್ಷಕ ಲಮಾಣಿ, ಡಿ.ವಿ.ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಡ್ಡಿ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುರೇಶ ರೆಡ್ಡಿ, ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ವಾರ್ತಾ ಧಿಕಾರಿ ಬಿ.ಆರ್.ರಂಗನಾಥ್ ಮತ್ತಿತ ರರು ಇದ್ದರು.

ಮಾದರಿ ಜೈಲು: 2017 ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ನಡೆದ ಸಂದರ್ಶಕರ ಮಂಡಳಿಯ ಸಭೆಯ ಬಳಿಕ ಕಾರಾಗೃಹವು ರಾಜ್ಯದಲ್ಲೇ ಮಾದರಿಯಾಗಿ ಪರಿವರ್ತನೆಗೊಳ್ಳುತ್ತಿದೆ. 188 ಕೈದಿಗಳು ಸ್ವಯಂ ಪ್ರೇರಣೆಯಿಂದ ದುಶ್ಚಟಗಳನ್ನು ಬಿಡುವುದಾಗಿ ಪತ್ರ ಬರೆದು ನೀಡಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ಬಳಿಕ, ಕೈದಿಗಳ ಆರೋಗ್ಯ ಸಮಸ್ಯೆ ಗಣನೀಯ ಸುಧಾರಣೆ ಕಂಡಿದೆ. ಕೌಶಲಾಭಿವೃದ್ಧಿ ಕಾರ್ಯಕ್ರಮದ ಬಳಿಕ ಹಲವರು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಜೈಲಿನ ಸಿಬ್ಬಂದಿ ವಿವರಿಸಿದರು.

ಕೈದಿಗಳಿಗೆ ಅಕ್ಷರಭ್ಯಾಸ, ಗ್ರಂಥಾಲಯ, ವಿವಿಧ ವೃತ್ತಿಪರ ತರಬೇತಿಗಳನ್ನು ನೀಡಲಾಗಿದೆ. ಸಾಮಾನ್ಯ ಜ್ಞಾನ, ಧಾರ್ಮಿಕ, ಅಧ್ಯಾತ್ಮಿಕ ಮತ್ತಿತರ ಪುಸ್ತಕಗಳನ್ನು ತರಿಸಲಾಗಿದೆ. ಕೈದಿಗಳಿಗೆ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಮಾತನಾಡಿ, ‘ಕಾರಾಗೃಹವು ಶಿಕ್ಷೆಯ ಕೇಂದ್ರವಾಗದೇ ಪರಿವರ್ತನೆಯ ತೊಟ್ಟಿಲಾಗಬೇಕು. ಅದನ್ನು ಅಧಿಕಾರಿಗಳು, ಸಿಬ್ಬಂದಿ ತೂಗಬೇಕು. ಒಮ್ಮೆ ಬಂದ ಕೈದಿಗಳು ಮತ್ತೊಮ್ಮೆ ಬರಬಾರದು. ಇಲ್ಲಿಂದ ಹೊರ ಹೋಗುವಾಗ ಅಕ್ಷರ, ಅರಿವು, ಸ್ವಾಸ್ಥ್ಯ, ಜ್ಞಾನಗಳನ್ನು ಕೊಂಡೊಯ್ಯಬೇಕು. ಮುಂದೆ ನರೇಗಾ ಮತ್ತಿತರ ಯೋಜನೆ, ಸರ್ಕಾರಿ ಸೌಲಭ್ಯಗಳ ಮೂಲಕ ಜೀವನ ಕಂಡುಕೊಳ್ಳಲು ಸಾಧ್ಯವಾಗುವ ಕುರಿತು ಜೀವನೋಪಾಯಗಳ ತರಬೇತಿ ಹಾಗೂ ಮಾಹಿತಿ ಕೊಡಿಸಬೇಕು’ ಎಂದರು.

‘ಕೈದಿಗಳ ಮನ ಪರಿವರ್ತನೆ ಜೊತೆಗೆ, ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅದಕ್ಕಾಗಿ ಕೃಷಿ, ತೋಟಗಾರಿಕೆ, ಕರಕುಶಲ ವಸ್ತುಗಳ ತಯಾರಿಕೆ, ಬೀಜೋತ್ಪಾದನೆ, ಕಸಿ ಸೇರಿದಂತೆ ಹಲವು ತರಬೇತಿಗಳನ್ನು ಕೊಡಿಸಬೇಕು’ ಎಂದರು.

‘ಪ್ರತಿ ಅಧಿಕಾರಿ, ಸಿಬ್ಬಂದಿ ತನ್ನ ಕೆಲವನ್ನು ಸಾಮಾಜಿಕ ಪ್ರೀತಿ, ನಿಷ್ಠೆ, ಬದ್ಧತೆಯಿಂದ ಮಾಡಿದರೆ ಪರಿವರ್ತನೆಯು ಸಾಕಾರಗೊಳ್ಳುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಸಿ.ಟಿ. ಶಿಲ್ಪಾನಾಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.