ADVERTISEMENT

ಗಣೇಶ ಮೆರವಣಿಗೆ ವೇಳೆ ಹಲ್ಲೆ:ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಮುಂದಾದ ‘ಅಂಜುಮನ್’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 20:22 IST
Last Updated 4 ಅಕ್ಟೋಬರ್ 2018, 20:22 IST

ರಾಣೆಬೆನ್ನೂರು:ನಗರದ ಹಿಂದೂ ವಿರಾಟ್ ಗಣಪತಿ ವಿಸರ್ಜನೆಯ ಸಮಯದಲ್ಲಿ ಕೆಲವು ಕಿಡಿಗೇಡಿಗಳು ನಡೆಸಿದ ಗಲಾಟೆಯಿಂದ ನಗರದಲ್ಲಿ ಶಾಂತಿ ಕದಡಿದಂತಾಗಿದೆ. ಇದನ್ನು ನಾವು ಕಟುವಾಗಿ ಖಂಡಿಸುತ್ತಿದ್ದು, ಎಲ್ಲ ಮುಸ್ಲಿಮರು ಸಭೆ ಸೇರಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಇಲ್ಲಿನ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ವಹಾಬ್ ಶಫಿ ಹೇಳಿದರು.

ಪೊಲೀಸರು ತೆಗೆದ ವಿಡಿಯೊ ಚಿತ್ರೀಕರಣದಲ್ಲಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗುವುದು ಎಂದರು.

ಭಾರತ ದೇಶವು ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲರಿಗೂ ತಾಯಿ ನಾಡಾಗಿದೆ. ಇಲ್ಲಿ ಎಲ್ಲರೂ ಶಾಂತಿಯುತವಾಗಿ ಬಾಳುತ್ತಾ ಬಂದಿದ್ದೇವೆ. ಇನ್ನೂ ಮುಂದೆಯೂ ಅದೇ ರೀತಿ ಬಾಳುವ ಸಂಕಲ್ಪ ನಮ್ಮದಾಗಿದೆ. ಯಾರೂ ಯಾರನ್ನೂ ಕೆರಳಿಸಬಾರದು ಎಂದರು.

ADVERTISEMENT

ತಾಲ್ಲೂಕಿನ ಹಿಂದೂ– ಮುಸ್ಲಿಂ ಬಾಂಧವರು ಸಹೋದರತೆಯಿಂದ ಬಾಳುತ್ತಿದ್ದು, ಈಗಲೂ ಕೆಲವು ಹಳ್ಳಿಗಳಲ್ಲಿ ಅಣ್ಣ, ಮಾವ, ಕಾಕ, ದೊಡ್ಡಪ್ಪ, ಅಕ್ಕ, ತಂಗಿ, ಅಮ್ಮ ಎಂದು ಸಂಬೋಧಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ. ಆದರೆ, ಕೆಲವು ಕಿಡಿಗೇಡಿಗಳು ಮಾಡಿದ ತಪ್ಪಿನಿಂದಾಗಿ ಎರಡೂ ಸಮಾಜದವರ ಮಧ್ಯೆ ಕಂದಕ ಉಂಟಾಗುವುದು ಖೇದಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.

ಮಹಬೂಬ್ ಅಲಿ ಕರ್ಜಗಿ, ಫಯಾಜ್ ಅಹ್ಮದ್ ಅತ್ತಾರ, ಎಸ್.ಎಂ.ಜವಳಿ, ನೂರುಲ್ಲಾ ಖಾಜಿ, ಅಹ್ಮದ್ ಸೌದಾಗಾರ ಹಾಗೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.