ADVERTISEMENT

ಎತ್ತಿನ ಬಂಡಿಯಲ್ಲಿ ಬಂದು ಬಿ.ಆರ್.ಪಾಟೀಲ ನಾಮಪತ್ರ ಸಲ್ಲಿಕೆ

ಆಳಂದ: ಕಾಂಗ್ರೆಸ್‌ ಶಕ್ತಿ ಪ್ರದರ್ಶನ, ಕಾರ್ಯಕರ್ತರ ಸಡಗರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 9:28 IST
Last Updated 25 ಏಪ್ರಿಲ್ 2018, 9:28 IST
ಆಳಂದದ ಪ್ರಮುಖ ಬೀದಿಗಳಲ್ಲಿ ಎತ್ತಿನ ಬಂಡಿ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್.ಪಾಟೀಲ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದರು
ಆಳಂದದ ಪ್ರಮುಖ ಬೀದಿಗಳಲ್ಲಿ ಎತ್ತಿನ ಬಂಡಿ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್.ಪಾಟೀಲ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದರು   

ಆಳಂದ: ಪಟ್ಟಣದ ಹೊರವಲಯದ ಚೆಕ್‌ಪೋಸ್ಟ್‌ನಿಂದ ಮಂಗಳವಾರ ಕಾರ್ಯಕರ್ತರ ಸಡಗರದೊಂದಿಗೆ ತಹಶೀಲ್ದಾರ್‌ ಕಚೇರಿವರೆಗೆ ಆಗಮಿಸಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್.ಪಾಟೀಲ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಸೋಮವಾರವೂ ನಾಮಪತ್ರ ಸಲ್ಲಿಸಿದ ಪಾಟೀಲ ಇಂದು ಬೆಳಿಗ್ಗೆ ಸ್ವಗ್ರಾಮ ಸರಸಂಬಾದಲ್ಲಿನ ಅವರ ತಾಯಿ ಸಮಾಧಿಗೆ ನಮನ ಸಲ್ಲಿಸಿ, ಅಲ್ಲಿಂದ ಜಿಡಗಾಕ್ಕೆ ತೆರಳಿ ದರ್ಶನ ಪಡೆದರು. ನಂತರ ಆಳಂದ ಪಟ್ಟಣದ ಗ್ರಾಮದೇವತೆ ಹನುಮಾನ ದೇವಸ್ಥಾನ, ಕಾಳಿಕಾದೇವಿ ಮಂದಿರ, ಜೈನ ಬಸದಿ, ಮಾಲ್ಗಣೇಶ್ವರ ದೇವಸ್ಥಾನ, ಶರಣ ಮಂಟಪ, ಬುದ್ಧನ ಮೂರ್ತಿ, ಲಾಡ್ಲೆ ಮಶಾಕ ದರ್ಗಾ ದರ್ಶನ ಪಡೆದು ಲಿಂಗಾಯತ ಭವನದಲ್ಲಿನ ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಲಾಡ್ಲೆ ಮಶಾಕ ದರ್ಗಾದಿಂದ ಅಪಾರ ಸಂಖ್ಯೆಯಲ್ಲಿದ್ದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಪಾಟೀಲ ಅವರಿಗೆ ದಾರಿಮಧ್ಯದಲ್ಲಿ ಅಭಿಮಾನಿಗಳು ಕಂಬಳಿ, ಹೂಮಾಲೆ ಹಾಕಿ ಶುಭಕೋರಿದರು. ಲಂಬಾಣಿ ಮಹಿಳೆಯರ ಕುಣಿತ, ಯುವಕರು ಸೇರಿದಂತೆ ಪೋತರಾಜ, ಡಂಬರ ಕುಣಿತ, ಕಾರ್ಯಕರ್ತರ ಜೈಘೋಷಗಳ ಸಂಭ್ರಮ ಎದ್ದು ಕಂಡಿತ್ತು.

ADVERTISEMENT

ಮುಖ್ಯರಸ್ತೆ ಮೇಲೆ ಸಾವಿರಾರೂ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ ಕಾರಣ ಸಂಚಾರ ವ್ಯವಸ್ಥೆಗೆ ಅಡ್ಡಿಯಾಯಿತು.

ನಂತರ ಮಧ್ಯಾಹ್ನ 2ಕ್ಕೆ ಪಾಟೀಲ ಅವರು ಮುಖಂಡ ಮೌಲಾ ಮುಲ್ಲಾ, ಬೀರಣ್ಣಾ ಪೂಜಾರಿ, ಜಿ.ಪಂ ಸದಸ್ಯ ಸಿದ್ದರಾಮ ಪ್ಯಾಟಿ, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ತಂಗೆಮ್ಮ ನಾಗೂರೆ ಜತೆಗೂಡಿ ಚುನಾವಣಾಧಿಕಾರಿ ಜಿ.ಎಸ್.ಗಡದವರ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ಮೆರವಣಿಗೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವಂತರಾವ ಮಾಲಿಪಾಟೀಲ, ಮಕದೂಮ್ ಅನ್ಸಾರಿ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ, ಶಂಕರರಾವ ದೇಶಮುಖ, ಜಗನ್ನಾಥ ಶೇಗಜಿ, ಅಪ್ಪಾಸಾಹೇಬ ದೇಶಮುಖ, ದತ್ತಪ್ಪ ಅಟ್ಟೂರು, ಸಲಾಂ ಸಗರಿ, ಸುಭಾಷ ಪೌಜಿ, ಗುರುಶರಣ ಪಾಟೀಲ, ಶಿವಪ್ಪ ವಾರಿಕ, ರೇವಣಪ್ಪ ನಾಗೂರೆ, ಲಿಂಗರಾಜ ಪಾಟೀಲ, ಮಲ್ಲಪ್ಪ ಹತ್ತರಕಿ, ಹಮೀದ್ ಅನ್ಸಾರಿ, ಪೀರ್ದೋಶಿ ಅನ್ಸಾರಿ, ಸತ್ತಾರ ಮುಗಟ, ಭೀಮಾಶಂಕರ ಪಾಟೀಲ, ಶ್ರೀಮಂತ ವಾಗದರ್ಗಿ, ಗುರುಲಿಂಗಜಂಗಮ ಪಾಟೀಲ, ದೇವೀಂದ್ರ ದಂಡಗೂಲೆ, ಅಜಗರಲಿ ಹವಾಲ್ದಾರ್‌, ಮೋಹನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.