ADVERTISEMENT

‘ಕವಿರಾಜ ಮಾರ್ಗ ಕನ್ನಡದ ಮೊದಲ ಕೃತಿ ಅಲ್ಲ’

ಮೇದಕ: ಸಂಭ್ರಮದ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:58 IST
Last Updated 31 ಜನವರಿ 2017, 6:58 IST
‘ಕವಿರಾಜ ಮಾರ್ಗ ಕನ್ನಡದ ಮೊದಲ ಕೃತಿ ಅಲ್ಲ’
‘ಕವಿರಾಜ ಮಾರ್ಗ ಕನ್ನಡದ ಮೊದಲ ಕೃತಿ ಅಲ್ಲ’   
(ದಾಸೋಹಿ ಗಳಂಗಪ್ಪ ವೇದಿಕೆ) ಸೇಡಂ: ‘ಕವಿರಾಜ ಮಾರ್ಗ’ ಕನ್ನಡದ ಮೊದಲ ಕೃತಿ  ಅಲ್ಲ. ಕವಿರಾಜ ಮಾರ್ಗಕ್ಕಿಂತಲೂ ಹಿಂದೆ ಹಲವು ಕೃತಿಗಳು ಪ್ರಕಟವಾಗಿರಬಹುದು ಎಂದು ಶ್ರೀವಿಜಯ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ ಎಂದು ಸಾಹಿತಿ ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
 
ತಾಲ್ಲೂಕಿನ ಮೇದಕ ಗ್ರಾಮದಲ್ಲಿ ಎಸ್‌ಸಿಇಆರ್‌ಡಿ ಪ್ರತಿಷ್ಠಾನದ ವತಿ­ಯಿಂದ ಸೋಮವಾರ ಆಯೋಜಿಸಿದ್ದ ಚನ್ನಕೇಶ್ವರ ಉತ್ಸವ ಹಾಗೂ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. 
 
ರಾಷ್ಟ್ರಕೂಟರ ರಾಜಧಾನಿಯಾಗಿದ್ದ ತಾಲ್ಲೂಕಿನ ಮಳಖೇಡದ ರಾಜಮನೆ­ತನದ ಕವಿ ಶ್ರೀವಿಜಯ ಬರೆದಿರುವ ‘ಕವಿರಾಜ ಮಾರ್ಗ’ ಮೊದಲು ಸಿಕ್ಕಿದೆ. ಕಾವ್ಯ, ಕೃತಿ ಮತ್ತು ಇನ್ನಿತರ ಗದ್ಯ ಕೃತಿಗಳು ಹೇಗಿರಬೇಕು ಎನ್ನುವುದನ್ನು ಕವಿ ಶ್ರೀವಿಜಯ ತನ್ನ ಪುಸ್ತಕದಲ್ಲಿ ಪ್ರಸ್ತಾಪಿಸುತ್ತಾನೆ ಎಂದ ಮೇಲೆ ಮೂಲ ಕೃತಿಗಳು, ಗ್ರಂಥಗಳು ಮುದ್ರಣ ಗೊಂಡಿದ್ದವು ಎಂಬುದು ಇದರಿಂದ ತಿಳಿಬರುತ್ತದೆ ಎಂದರು. 
 
ಪ್ರಾದೇಶಿಕವಾಗಿ ಹಿಂದುಳಿದಿರುವಿಕೆ ಮತ್ತು ಭಾಷೆಯ ಕುರಿತು ಅರಿವಿನ ಕೊರತೆಯಿಂದಾಗಿ ಕನ್ನಡ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹೀಗಾಗಿ ಸರ್ಕಾರ ಭಾಷೆಯ ವಿಕಾಸಕ್ಕೆ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.
 
ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ ಮಾತನಾಡಿ, ಪ್ರಸ್ತುತ ಕನ್ನಡವನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಅದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಗಡಿಭಾಗದ ಜನರಲ್ಲಿ ಕನ್ನಡ ಭಾಷೆಯ ಕುರಿತು ಜಾಗೃತಿ ಮೂಡಿಸಬೇಕು ಎಂದರು. 
 
ಗ್ರಾಮದ ಚೆನ್ನಕೇಶವ ದೇವಾಲಯ­ದಿಂದ ದಾಸೋಹಿ ಗಳಂಗಪ್ಪ ಪಾಟೀಲ ವೇದಿಕೆವರೆಗೆ ವಿವಿಧ ಕಲಾತಂಡ­ಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. 
 
ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಮುಖಂಡ ರಾಜಕುಮಾರ ಪಾಟೀಲ ಚಿತ್ರಕಲಾಕೃತಿ ಬಿಡುಗಡೆ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬನ್ನಮ್ಮ ಕಿಷ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶಾರದಮ್ಮ ಜೈಪಾಲರೆಡ್ಡಿ, ವೆಂಕಟರಾಮರೆಡ್ಡಿ ಕಡ­ತಾಲ, ನಾಗಿಂದ್ರಪ್ಪ ಸಾಹುಕಾರ, ಸದಾ­ಶಿವರೆಡ್ಡಿ ಗೋಪನಪಲ್ಲಿ, ಹಣಮಂತಪ್ಪ ಪಾಟೀಲ ಮಲ್ಲಾಬಾದ್, ಭೀಮಶಪ್ಪ ನಾಯ್ಕಿನ್, ಅರುಣ ಗೋಪಾಲರೆಡ್ಡಿ, ಗುರುನಾಥರೆಡ್ಡಿ ಗಂಗರಾವಲಪಲ್ಲಿ, ಓಂಪ್ರಕಾಶ ಪಾಟೀಲ ತರನಳ್ಳಿ, ಹೇಮ್ಲಾನಾಯಕ, ಗುರುನಾಥರೆಡ್ಡಿ ಪಾಕಲ್, ಗೋಪಾರೆಡ್ಡಿ ಪಾಟೀಲ, ರಾಮುಲುನಾಯಕ, ತುಳಸಿರಾಮ, ಸಿದ್ದು ಪೂಜಾರಿ ಇದ್ದರು. 
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಾಮೋದರರೆಡ್ಡಿ ಪಾಟೀಲ ಸ್ವಾಗತಿಸಿ­ದರು. ಸಂಚಾಲಕ ಮೊಘಲಪ್ಪ ಯಾನಾ­ಗುಂದಿ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣಾರೆಡ್ಡಿ, ಹೇಮಲತಾ ನಿರೂಪಿಸಿದರು. 
 
**
ತೆಲುಗು ಭಾಷೆ ಬಳಕೆ 
ಮೇದಕನಲ್ಲಿ ಸೋಮವಾರ ನಡೆದ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ದಾಮೋದರರೆಡ್ಡಿ ಪಾಟೀಲ ಅವರು ಸ್ವಾಗತ ಭಾಷಣದಲ್ಲಿ ತೆಲುಗು ಬಳಸಿದರು.
 
ವೇದಿಕೆಯಲ್ಲಿದ್ದ ಗಣ್ಯರನ್ನು ಪರಿಚಯಿಸುವಾಗ ಅವರ ಹೆಸರು ಗೊತ್ತಾಗದಿದ್ದಾಗ ‘ಈತನಿ ಪೇರು ಏಂಟಿರಾ’ ಎಂದು ಪಕ್ಕದಲ್ಲಿದ್ದವರನ್ನು ತೆಲುಗಿನಲ್ಲಿ ಕೇಳಿದರು. ಇದರಿಂದ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಾಹಿತಿಗಳು, ಕನ್ನಡಾಭಿಮಾನಿಗಳಿಗೆ ಇರಿಸುಮುರಿಸಾಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.