ADVERTISEMENT

ಗ್ರಾ.ಪಂ. ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಆಂದೋಲಾ ಗ್ರಾ.ಪಂ. ಅವ್ಯವಹಾರ: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 4:23 IST
Last Updated 18 ಏಪ್ರಿಲ್ 2017, 4:23 IST
ಜೇವರ್ಗಿ: ಆಂದೋಲಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅವ್ಯವಹಾರ ನಡೆಸಲಾಗಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಆಂದೋಲಾ ಗ್ರಾಮಸ್ಥರು ಸೋಮವಾರ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
 
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗುರಲಿಂಗಪ್ಪಗೌಡ ಮಾಲಿಪಾಟೀಲ ಮಾತನಾಡಿ, ಎರಡು ವರ್ಷದ ಅವಧಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ₹70ಲಕ್ಷ ಅವ್ಯವಹಾರ ನಡೆಸಲಾಗಿದೆ.
 
ಗ್ರಾಮ ಪಂಚಾಯಿತಿ ಸದಸ್ಯರ ಕುಟುಂಬದವರ ಹೆಸರಿನಲ್ಲಿ ಚೆಕ್‌ಗಳನ್ನು ನೀಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವ್ಯವಹಾರ ನಡೆಸಿದ್ದಾರೆ ಎಂಬುದು ಬ್ಯಾಂಕ್ ಖಾತೆ ವ್ಯವಹಾರದಿಂದ ತಿಳಿದು ಬಂದಿದೆ ಎಂದು ದೂರಿದರು.
 
ಅವ್ಯವಹಾರ ನಡೆಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ, ಗ್ರಾಮ ಸಭೆ ನಡೆಸಿಲ್ಲ. ಕಾಮಗಾರಿಗಳ ಕುರಿತು ಕ್ರಿಯಾ ಯೋಜನೆ ತಯಾರಿಸದೆ ಮನ ಬಂದಂತೆ ಸರ್ಕಾರದ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
 
ಸ್ಥಳಕ್ಕೆ ಭೇಟಿ ನೀಡಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಮಾನೆ ಅವರಿಗೆ ಮನವಿ ಸಲ್ಲಿಸಿದರು. ಪ್ರಭು ಮಾನೆ ಮಾತನಾಡಿ, ಹಣ ದುರುಪಯೋಗ ಪಡಿಸಿಕೊಂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಶೀಘ್ರದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಲಾ ಗುವುದು ಎಂದು ಭರವಸೆ ನೀಡಿದರು. 
 
ಗ್ರಾಮ ಪಂಚಾಯಿತಿ ಸದಸ್ಯರಾದ ಯಶವಂತ ಹೋತಿನಮಡು, ಅಯ್ಯಣ್ಣ ಶಹಾಪುರ, ಮುಖಂಡರಾದ ವಿಶ್ವರಾಧ್ಯ ಹಿರೇಮಠ, ಗೋವಿಂದ ತುಳೇರ್, ಮಲ್ಲಣ್ಣ ಲಕ್ಕಾಣಿ, ಮಲ್ಲಿಕಾರ್ಜುನ ಹಂಗರಗಿ, ಸಂತೋಷಗೌಡ ಬಿರಾಳ, ಗಿರೆಪ್ಪ ಹವಾಲ್ದಾರ, ಬಸವರಾಜ ಹಂದಿಗಿ, ಶಿವಶರಣಪ್ಪ ಆಂದೋಲಾ, ಹುಸನಪ್ಪ ಗುಂಡಳ್ಳಿ, ಶಾಂತಪ್ಪ ಸಾಹು ಆಂದೋಲಾ, ಕರಣಪ್ಪ ರದ್ದೇವಾಡಗಿ, ರಾಜು ಜೇವರ್ಗಿ, ಮಲ್ಲೇಶಗೌಡ ಹಳ್ಳಿ, ಭಾಗರೆಡ್ಡಿ ಹೋತಿನಮಡು, ಮಲ್ಲಾರಿ ಮಹೇಂದ್ರಕರ್, ಸೈಯದ್ ಆರೀಫ್ ಹುಸೇನ್ ಜಮಾದಾರ್ ಇದ್ದರು.
 
ವಾಮಾಚಾರ: ಆಂದೋಲಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆಸಿದ ಅವ್ಯವಹಾರ ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸುವ ಮಾಹಿತಿ ಅರಿತ ಕೆಲವು ಕಿಡಿಗೇಡಿಗಳು ಗ್ರಾಮ ಪಂಚಾಯಿತಿ ಕಚೇರಿ ಮುಖ್ಯ ದ್ವಾರದ ಮುಂದೆ ಕಾಯಿ, ನಿಂಬೆ ಹಣ್ಣು, ಅರಿಶಿಣ, ಕುಂಕುಮ ಹಾಕಿ ವಾಮಾಚಾರ ನಡೆಸಿದ್ದಾರೆ.
 
‘ವಾಮಾಚಾರ ನಡೆಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು’ ಎಂದು ಮುಖಂಡ ಗುರುಲಿಂಗಪ್ಪಗೌಡ ಮಾಲಿಪಾಟೀಲ ಒತ್ತಾಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.