ADVERTISEMENT

‘ಟ್ರಾಮಾ’ ಕೇಂದ್ರ ಕಾಮಗಾರಿ ಶೀಘ್ರ ಪೂರ್ಣ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:08 IST
Last Updated 19 ಏಪ್ರಿಲ್ 2017, 4:08 IST
ಕಲಬುರ್ಗಿ:  ತುರ್ತು ಚಿಕಿತ್ಸೆ ಒದಗಿಸಲು ಅನುವಾಗುವಂತೆ ₹25 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಟ್ರಾಮಾ ಕೇಂದ್ರ ನಿರ್ಮಿಸಲಾಗುತ್ತಿದ್ದು, ನವೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು  ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು. 
 
ತಾಲ್ಲೂಕಿನ ನಂದೂರ (ಬಿ) ಗ್ರಾಮದಲ್ಲಿ ಮಂಗಳವಾರ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು
 
‘ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಪ್ರಮುಖ ಧ್ಯೇಯವಾಗಿದೆ. ಇದರಲ್ಲಿ ಕರ್ತವ್ಯ ಲೋಪ ಮಾಡುವ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ವೈದ್ಯರು ಕೇಂದ್ರ ಸ್ಥಾನದಲ್ಲಿ ವಾಸವಿದ್ದು, ಜನರಿಗೆ ಪ್ರಾಮಾಣಿಕವಾಗಿ ಆರೋಗ್ಯ ಸೇವೆ ಒದಗಿಸಲು ಬದ್ಧರಾಗಬೇಕು’ ಎಂದು ತಿಳಿಸಿದರು.

‘ಕರ್ತವ್ಯಕ್ಕೆ ಹಾಜರಾಗದ ನಂದೂರ(ಬಿ) ಕೇಂದ್ರದ ವೈದ್ಯರ ಬಗ್ಗೆ ಬಂದಿರುವ ಆರೋಪದ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಗಮನ ಹರಿಸಿ ನೋಟಿಸ್ ನೀಡಬೇಕು’ ಎಂದು ಸೂಚಿಸಿದರು. 
 
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದ್ದು, ಈ ಕುರಿತು ಆಶಾ ಕಾರ್ಯಕರ್ತೆಯರು ಜನರಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.
 
ಶಾಸಕ ಜಿ. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವಾಣ್, ಜಿಲ್ಲಾ ಪಂಚಾಯಿತಿ ಸದಸ್ಯ ಶರಣಗೌಡ ಪಾಟೀಲ, ನಂದೂರ(ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಂಗಮ್ಮ ಕಟ್ಟಿಮನಿ, ಉಪಾಧ್ಯಕ್ಷ ಕಲ್ಲಪ್ಪ ಬಿರಾದಾರ, ಶಾಂತಕುಮಾರ ಪಾಟೀಲ, ವಿಜಯಕುಮಾರ ಜಿ., ರಾಮಕೃಷ್ಣ, ಡಾ. ರಜನೀಶ ಪಟೇಲ್, ಮೃತ್ಯುಂಜಯ ಸ್ವಾಮಿ, ಶರಣು ಕಣ್ಣಿ, ಲಿಂಗರಾಜ ತಾಡಪಳ್ಳಿ, ಶರಣಪ್ಪ           ಸಾಹುಕಾರ, ವೇದಮೂರ್ತಿ ಗಂಗಾಧರ, ಜಯದೇವ ಹೃದ್ರೋಗ ಆಸ್ಪತ್ರೆಯ ಡಾ. ರಶೀದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಕುಮಾರ ಕುಲಕರ್ಣಿ ಇದ್ದರು.
 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಕೀಟನಾಶಕ ಅಧಿಕಾರಿ ಚಾಮರಾಜ ದೊಡ್ಮನಿ ನಿರೂಪಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.