ADVERTISEMENT

ದುಡಿಮೆ, ಶೋಷಣೆಯಿಂದ ಮುಕ್ತರಾಗದ ಮಕ್ಕಳು

ತ್ಯಾಜ್ಯದ ರಾಶಿಯಲ್ಲಿ ಕಳೆಯುತ್ತಿದೆ ಬಾಲ್ಯ

ರಾಹುಲ ಬೆಳಗಲಿ
Published 16 ಜನವರಿ 2017, 6:21 IST
Last Updated 16 ಜನವರಿ 2017, 6:21 IST
ದುಡಿಮೆ, ಶೋಷಣೆಯಿಂದ ಮುಕ್ತರಾಗದ ಮಕ್ಕಳು
ದುಡಿಮೆ, ಶೋಷಣೆಯಿಂದ ಮುಕ್ತರಾಗದ ಮಕ್ಕಳು   

ಕಲಬುರ್ಗಿ: ‘ನಗರದಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಆಗದಿದ್ದರೆ, ಮೂರು ಸಮಸ್ಯೆ ಒಂದೊಂದಾಗಿ ಬೆನ್ನತ್ತಿ ಕಾಡುತ್ತವೆ. ಒಂದೆಡೆ ತ್ಯಾಜ್ಯ ರಾಶಿಯ ದುರ್ವಾಸನೆ, ಮತ್ತೊಂದೆಡೆ ಹಂದಿಗಳ ಉಪಟಳ. ಇವುಗಳ ಮಧ್ಯೆ ಚಿಂದಿ ಆಯುವ ಮಕ್ಕಳು ಅಳಿದುಳಿದ ವಸ್ತುಗಳ ಹುಡುಕಾಟದಲ್ಲಿ ಅಲ್ಲಿಯೇ ಇಡೀ ದಿನ ಕಳೆದುಬಿಡುತ್ತಾರೆ’.

ಆನಂದನಗರ ಸಮೀಪದ ರಸ್ತೆ ಬದಿ ವಿಲೇವಾರಿಯಾಗದ ತ್ಯಾಜ್ಯದ ರಾಶಿ ತೋರಿಸುತ್ತ ಹೀಗೆ ಹೇಳಿದವರು ಖಾಸಗಿ ಸಂಸ್ಥೆ ಉದ್ಯೋಗಿ ಮಹೇಶ್. ತ್ಯಾಜ್ಯದ ಸಮಸ್ಯೆ ಸುಲಭವಾಗಿ ಪರಿಹಾರ ಕಾಣದಿರುವುದು ಅವರಿಗೆ  ಬೇಸರ ಉಂಟು ಮಾಡಿದೆ. ಚಿಂದಿ ಆಯುವುದರಲ್ಲೇ ಮಕ್ಕಳು ತಮ್ಮ ಬಾಲ್ಯ ಕಳೆದುಕೊಳ್ಳುತ್ತಿರುವುದು ಆತಂಕ ಮೂಡಿಸಿದೆ.

ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡಬೇಕು ಮತ್ತು ಶಾಲೆಗೆ ಕರೆ ತರಬೇಕು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆ ಪರಿಚಯಿಸಿದರೂ ಕೆಲ ಮಕ್ಕಳು ಇನ್ನೂ ಶಾಲೆಯಿಂದ ದೂರ ಉಳಿದಿದ್ದಾರೆ. ಉಚಿತ ಶಿಕ್ಷಣ ಸೌಲಭ್ಯವಿದ್ದರೂ ಮಕ್ಕಳು  ಶಾಲೆಗೆ ಹೋಗದೇ ಚಿಂದಿ ಆಯಲು, ಭಿಕ್ಷೆ ಬೇಡಲು ಹೋಗುತ್ತಾರೆ ಎಂದು ಅವರು ಹೇಳಿದರು.

ದುಡಿಮೆ, ಭಿಕ್ಷಾಟನೆ: ‘ತ್ಯಾಜ್ಯದ ರಾಶಿ ಬಳಿ ಕೆಲ ಮಕ್ಕಳು ಚಿಂದಿ ಆಯ್ದರೆ, ಕೆಲ ಮಕ್ಕಳು ರೈಲ್ವೆ ಮತ್ತು ಬಸ್ ನಿಲ್ದಾಣದ ಬಳಿ ಭಿಕ್ಷೆ ಬೇಡುತ್ತಾರೆ. ಬೆನ್ನ ಮೇಲೆ ಚಿಂದಿ ಮೂಟೆ ಹೊತ್ತು ಕೆಲ ಮಕ್ಕಳು ತ್ಯಾಜ್ಯ ಹುಡುಕಿ ಹೊರಟರೆ, ಕೆಲ ಮಕ್ಕಳು ಒಂದು ಅಥವಾ ಎರಡು ರೂಪಾಯಿಗಾಗಿ ಭಿಕ್ಷೆ ಬೇಡುತ್ತಾರೆ’ ಎಂದು ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲ ಮಕ್ಕಳು ಹೋಟೆಲ್‌, ಗ್ಯಾರೇಜು ಮತ್ತು ಇತರೆಡೆ ಬಾಲ ಕಾರ್ಮಿಕರಾಗಿ ದುಡಿಯುತ್ತಾರೆ. ಹಗಲು ರಾತ್ರಿಯೆನ್ನದೇ ದುಡಿಯುವ ಮಕ್ಕಳ ಸಂಬಳ ಅವರ ಪೋಷಕರ ಪಾಲಾಗುತ್ತದೆ. ಮಕ್ಕಳಿಗೆ ತಿಂಡಿ ಮತ್ತು ಊಟ ಹೊರತುಪಡಿಸಿ ಮತ್ತೇನೂ ಸಿಗುವುದಿಲ್ಲ. ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ ನಗರದಲ್ಲಿ ಮಾತ್ರ ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಮಕ್ಕಳು ದುಡಿಮೆ ಮತ್ತು ಶೋಷಣೆಯಿಂದ ಮುಕ್ತರಾಗಿಲ್ಲ’ ಎಂದು ಅವರು ತಿಳಿಸಿದರು.

ಸಹಾಯವಾಣಿಯಿಂದ ನೆರವು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ 2009ರಿಂದ ಕಲಬುರ್ಗಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಸಹಾಯವಾಣಿ ಸಂಸ್ಥೆಯು (ಚೈಲ್ಡ್‌  ಹೆಲ್ಪ್‌ಲೈನ್‌) ಮಕ್ಕಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಮಕ್ಕಳಿಗೆ ಶಿಕ್ಷಣ ದೊರೆಯಬೇಕು, ಅನಾಥಭಾವ ಕಾಡಬಾರದು ಮತ್ತು ಸಂಕಷ್ಟದಲ್ಲಿ ಸಿಲುಕಬಾರದು ಎಂಬ ಉದ್ದೇಶದಿಂದ ಬೇರೆ ಬೇರೆ ಸ್ವರೂಪದಲ್ಲಿ ಮಕ್ಕಳ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದೆ.

ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸುವುದು, ಉತ್ತಮ ಶಿಕ್ಷಣ ಒದಗಿಸುವುದು,  ಪೋಷಕರನ್ನು ಪತ್ತೆ ಮಾಡಿ ಒಪ್ಪಿಸುವುದು ಸೇರಿದಂತೆ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯ ಪ್ರತಿನಿಧಿಗಳು ಸಂಕಷ್ಟದಲ್ಲಿರುವ ಮಕ್ಕಳಿಗೆ ನೆರವಾಗಲು ಪ್ರಯತ್ನಿಸುತ್ತಾರೆ. ಮಕ್ಕಳ ಕುರಿತು ಸಾರ್ವಜನಿಕರು ಸಂಸ್ಥೆಗೆ ಮಾಹಿತಿ ನೀಡಬಹುದು.

ಮುಕ್ತವಾಗದ ಪದ್ಧತಿ
‘ವರ್ಷ 2007ರೊಳಗೆ ರಾಜ್ಯವನ್ನು ಬಾಲ ಕಾರ್ಮಿಕ ಪದ್ಧತಿ ಮುಕ್ತಗೊಳಿಸುವ ಕುರಿತು ಆಗಿನ ಕಾಂಗ್ರೆಸ್‌ ಸರ್ಕಾರದ ಶಿಕ್ಷಣ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದರು. ಈಗಲೂ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿದ್ದು, ರಾಮಲಿಂಗಾರೆಡ್ಡಿಯವರ ಸಚಿವ ಖಾತೆ ಬದಲಾಗಿದೆ. ಆದರೆ ಬಾಲ ಕಾರ್ಮಿಕ ಪದ್ಧತಿ ನಿವಾರಣೆಯಾಗಿಲ್ಲ’ ಎಂದು ನಿವೃತ್ತ ಶಿಕ್ಷಕ ಸಿದ್ರಾಮಪ್ಪ ಹೇಳಿದರು.

‘ಪ್ರತಿ ವರ್ಷ ಜೂನ್‌, ಜುಲೈ ತಿಂಗಳಲ್ಲಿ  ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಮನೆಗೆ ಬಂದು ಮಕ್ಕಳನ್ನು ಶಾಲೆಗೆ ಸೇರಿಸಲು ಕೋರುತ್ತಾರೆ. ಆದರೆ ಮಕ್ಕಳನ್ನು ಶಾಲೆಗೆ ಕಳುಹಿಸುವಷ್ಟು ಶಕ್ತಿ ನಮಗಿಲ್ಲ. ಮೂರು ಹೊತ್ತಿನ ಊಟ ಸಿಗದಿರುವಾಗ, ಶಾಲೆಗೆ ಹೇಗೆ ಕಳುಹಿಸುವುದು? ಎಂದು ಮಕ್ಕಳ ಪೋಷಕರು ಹೇಳಿದರು.

ADVERTISEMENT

*
ಬಸ್‌ ಅಥವಾ ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಭಿಕ್ಷೆ ಬೇಡುವುದು ಸಾಮಾನ್ಯವಾಗಿದೆ. ಅಂತಹ ಮಕ್ಕಳನ್ನು ಪತ್ತೆ ಮಾಡಿ ಅಗತ್ಯ ಸೌಕರ್ಯ ಕಲ್ಪಿಸಿ ಶಾಲೆಗೆ ಸೇರಿಸಬೇಕಿದೆ.
–ಸಿದ್ರಾಮಪ್ಪ,
ನಿವೃತ್ತ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.